ಬ್ಯಾಡಗಿ ತಳಿಯ ಉತ್ತಮ ಮೆಣಸಿನಕಾಯಿಯನ್ನು ಬೆಳೆಯುವ ರೈತರು, ಅವುಗಳು ಹಣ್ಣಾಗುವವರೆಗೂ ಕಾದು, ನಂತರ ಅವುಗಳನ್ನು ಒಣಗಿಸಿ ಮಾರಾಟ ಮಾಡುತ್ತಾರೆ. ಇದೆಲ್ಲಾ ಆಗಬೇಕಾದರೆ ನಾಲ್ಕು ತಿಂಗಳ ಸಮಯ ಬೇಕಾಗುತ್ತದೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತಾದೆ. ಆದ್ರೆ, ಇದೆಲ್ಲವನ್ನು ಮಾಡಿ, ರೈತರು ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಮಾರ್ಕೇಟ್ಗೆ ತಗೆದುಕೊಂಡು ಹೋದರೆ, ಅಲ್ಲಿನ ಬೆಲೆ ಕೇಳಿ ರೈತರಿಗೆ ದೊಡ್ಡಮಟ್ಟದ ನಿರಾಸೆಯಾಗುತ್ತಿದೆ.
ಕಳೆದ ವರ್ಷ ಪ್ರತಿ ಕ್ವಿಂಟಲ್ ಒಣ ಮೆಣಸಿನಕಾಯಿ 40 ರಿಂದ 50 ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗಿತ್ತು. ಎರಡು ವಾರದ ಹಿಂದೆ ಕೂಡಾ ನಲವತ್ತು ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗಿತ್ತು. ಈ ಹಿನ್ನಲೆ ತಮ್ಮ ಬೆಳೆಗ ಉತ್ತಮ ಬೆಲೆ ಸಿಗುತ್ತೆ ಎಂದ ರೈತರು, ನಿನ್ನೆ ಗದಗ ಮಾರ್ಕೇಟ್ಗೆ ಸಾಕಷ್ಟು ಒಣ ಮೆಣಸಿನಕಾಯಿಗಳನ್ನು ತಗೆದುಕೊಂಡು ಹೋಗಿದ್ದರು. ಆದ್ರೆ, ಇದೀಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿ ಹದಿನೈದರಿಂದ ಇಪ್ಪತ್ತು ಸಾವಿರಕ್ಕೆ ಮಾರಾಟವಾಗುತ್ತಿದೆಯಂತೆ. ಹೀಗಾಗಿ ರೈತರು ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಮಾರಾಟ ಮಾಡದೆ ಮರಳಿ ತಂದಿದ್ದಾರೆ.