ಚಿಕ್ಕಮಗಳೂರು, ಜನವರಿ 05: ಗೊಲ್ಲರ ಬೀದಿಗೆ ಕೆಲಸಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವರಾಮ್, ರಾಜಪ್ಪ, ಶಂಕರ್, ತಮ್ಮಯ್ಯ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ 11ಜನರ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಜನವರಿ 1 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಗೆ ದಲಿತ ಯುವಕ ಮಾರುತಿ ಜೆಸಿಬಿ ಜೊತೆ ಕೆಲಸಕ್ಕೆ ಬಂದಿದ್ದನು. ಮಾರುತಿ ದಲಿತ ಯುವಕ ಎಂದು ತಿಳಿಯುತ್ತಿದ್ದಂತೆ ಗೊಲ್ಲರ ಬೀದಿ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲದೆ ಆತನ ಬಳಿ ಇದ್ದ 20 ಸಾವಿರ ಹಣವನ್ನ ದಂಡವಾಗಿ ಕಟ್ಟಿಸಿಕೊಂಡಿದ್ದರು. ಹಲ್ಲೆಗೊಳಗಾದ ಯುವಕನಿಗೆ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಜನವರಿ 2ರಂದು ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 15ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.