ಹಾಸನ: ಹಾಸನದ ಸುಪ್ರಸಿದ್ಧ ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ. ಹಾಸನಾಂಬ ದೇಗುಲ ಬಾಗಿಲು ತೆರಯುವ ದಿನಾಂಕ, ದರ್ಶನ ಅವಕಾಶಕ್ಕೆ ಇರುವ ದಿನಗಳು ಮತ್ತು ಇತರ ಮಾಹಿತಿ ಇಲ್ಲಿದೆ.
ವರ್ಷಕ್ಕೊಮ್ಮೆ ಮಾತ್ರ ನಡೆಯುವ ಅದ್ಧೂರಿ ಜಾತ್ರಾ ಮಹೋತ್ಸವ, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುವ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲನ್ನು ಇದೇ ಗುರುವಾರ (ಅಕ್ಟೋಬರ್ 24) ರಂದು ತೆರೆಯಲಾಗುತ್ತಿದೆ. ಅ.24 ರಿಂದ ನವೆಂಬರ್ 3ರವರೆಗು ದೇಗುಲದ ಬಾಗಿಲು ತೆರೆದಿರಲಿದ್ದು, ಕೇವಲ 9 ದಿನಗಳು ಮಾತ್ರ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 24ರ ಗುರುವಾರ ಮದ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಮೊದಲದಿನ ಬಾಗಿಲು ತೆರೆದ ನಂತರ ದೇಗುಲ ಶುದ್ದಿ ಮಾಡಲಾಗುತ್ತೆ. ಮತ್ತು ಮರುದಿನ ಬೆಳಿಗ್ಗೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುತ್ತೆ. ದಿನದ 24 ಗಂಟೆಗಳೂ ಕೂಡ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರ ದರ್ಶನಕ್ಕೆ ಬೇಕಾದ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಈ ವರ್ಷ ದೇವಿಗೆ ಒಟ್ಟು ನಾಲ್ಕು ಬಾರಿ ಬೇರೆ ಬೇರೆ ರೀತಿಯ ವಿಶಿಷ್ಟ ಅಲಂಕಾರ, ವಸ್ತ್ರಧಾರಣೆ ಮಾಡಲಾಗುತ್ತದೆ. ಈ ನಡುವೆ ನೈವೇದ್ಯದ ಸಂದರ್ಭ ಹೊರತು ಪಡಿಸಿ ದಿನದ 24 ಗಂಟೆಯೂ ಭಕ್ತರ ದರ್ಶನಕ್ಕೆ ಅವಕಾಶವಿರುತ್ತದೆ. ಹಾಸನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇಗುಲದಲ್ಲಿ ದೇವಿ ದರ್ಶನ ಸಿಗುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತೆ.
ಕಳೆದ ಬಾರಿ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ವರ್ಷ ಸುಮಾರು 20 ರಿಂದ 25 ಲಕ್ಷ ಭಕ್ತರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ದೇಗುಲವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲುಗಳ ಬ್ಯಾರಿಕೇಡ್, ಸಾಂಪ್ರದಾಯಿಕ ಮಾದರಿಯ ಮಾಡೆಲ್ಗಳು, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಜ್ಮನ್ ಟೆಂಟ್ ಮತ್ತು ದೊನ್ನೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಇನ್ನು ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ವರ್ಷದಿಂದ ವರ್ಷಕ್ಕೆ ಹಲವು ಆಕರ್ಷಣೆಗಳೊಂದಿಗೆ ಗಮನ ಸೆಳೆಯುತ್ತಿರುವ ಹಾಸನಾಂಬೆ ಉತ್ಸವದಲ್ಲಿ ಈ ವರ್ಷ ದಸರಾ ಮಾದರಿಯ ದೀಪಾಲಂಕಾರ, ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ, ಹಾಟ್ ಏರ್ ಬಲೂನ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡು ನಡೆಯುತ್ತಿರುವ ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾಮಹೋತ್ಸವದಲ್ಲಿ ಈ ಬಾರಿ ನಗರದಲ್ಲಿ ಮೈಸೂರು ದಸರಾ ಮಾದರಿಯ ಚಿತ್ತಾಕರ್ಷಕ ಲೈಟಿಂಗ್ ಮಾಡಲಾಗಿದೆ. ಲೈಟಿಂಗ್ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್ ಇರಲಿದೆ.