ಹೆಚ್ ಡಿ ಕೋಟೆ, ನವೆಂಬರ್26, 2024: ಶುಂಠಿ ಶುದ್ಧೀಕರಣ ಘಟಕದಿಂದ ಕಪಿಲೆಯ ಒಡಲು ಕಲುಷಿತವಾಗುತ್ತಿದೆ. ರಾಸಾಯನಿಕ ಬಳಸುತ್ತಿರುವ ಪರಿಣಾಮ ಕಪಿಲಾನದಿಯ ನೀರು ಕಲುಷಿತವಾಗ್ತಿದ್ದು, ಹೆಚ್ ಡಿ ಕೋಟೆ ಜನರಲ್ಲಿ ಆತಂಕ ಮನೆ ಮಾಡಿದೆ.

ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನಲ್ಲಿರುವ ಶುಂಠಿ ಶುದ್ಧೀಕರಣ ಕೇಂದ್ರಗಳು ಈಗ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಕಲುಷಿತ ನೀರಿನಿಂದ ದನ-ಕರುಗಳು ಮಾತ್ರವಲ್ಲದೇ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.ಐದಕ್ಕೂ ಹೆಚ್ಚು ಶುದ್ಧೀಕರಣ ಕೇಂದ್ರದಿಂದ ಸಾವಿರಾರು ಜನರ ಆರೋಗ್ಯಕ್ಕೆ ಕುತ್ತು ಬಂದಿದೆ.

ಈ ಸಂಬಂಧ ಪರಿಸರ ಇಲಾಖೆ, ಮಾಲಿನ್ಯ ಮಂಡಳಿ, ಅರಣ್ಯ ಇಲಾಖೆ, ಜಲಮಂಡಳಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆಯಾಗಿದ್ರೂ ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ಜನರು ಬಲಿಪಶು ಆಗ್ತಿದ್ದಾರೆ.ಕೃಷಿ ಭೂಮಿಯನ್ನು ವಾಣಿಜ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳುವ ಮುನ್ನ ಅನ್ಯಕ್ರಾಂತ ಮಾಡಿಸಿಕೊಳ್ಳಬೇಕು.ಆದರೆ ಕಾನೂನು ಉಲ್ಲಂಘಿಸಿ ಶುದ್ಧೀಕರಣ ಘಟಕವನ್ನ ತೆರೆಯಲಾಗಿದೆ. ಕೂಡಲೇ ಶುಂಠಿ ಶುದ್ದೀಕರಣ ಕೇಂದ್ರಗಳನ್ನು ಬಂದ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಎಲ್ಲಾ ಶುಂಠಿ ಶುದ್ದೀಕರಣ ಕೇಂದ್ರಗಳನ್ನು ಮುಚ್ಚಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹ ಮಾಡಿದ್ದಾರೆ.
