ಮೈಸೂರು: ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಅಳಿಯನ ಕುಟುಂಬದ ವಿರುದ್ದ ಗೃಹಿಣಿಯ ತಾಯಿ ದೂರು ನೀಡಿರುವ ಘಟನೆ ಮೈಸೂರು ಜಿಲ್ಲೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕೂಡ್ಲೂರು ನಿವಾಸಿ ಅಂತೊಣಿ ಕಿರಣ್ ಪತ್ನಿ ನಿತ್ಯ ನಿರ್ಮಲ (25) ಸಾವನ್ನಪ್ಪಿದ ಗೃಹಿಣಿ. ದಂಪತಿಗೆ ಒಂದು ವರ್ಷದ ಮಗುವಿದ್ದು, ಎರಡೂವರೆ ವರ್ಷಗಳ ಹಿಂದೆ ಗುರುಹಿರಿಯರು ನಿಶ್ಚಯಿಸಿ ಇಬ್ಬರಿಗೂ ಮದುವೆ ಮಾಡಲಾಗಿತ್ತು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಣ್ಣೇನಹಳ್ಳಿಯ ತೆರೇಸಮ್ಮರ ಎರಡನೇ ಪುತ್ರಿಯನ್ನು ಕೂಡ್ಲೂರಿನ ಅಂತೋಣಿ ಕಿರಣ್ಗೆ ಮದುವೆ ಮಾಡಿ ಕೊಟ್ಟಿದ್ದರು.
ಕೆಲವು ದಿನಗಳಿಂದ ಪತಿ ಅಂತೋಣಿಕಿರಣ್, ನನ್ನ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರನ್ನು ಮದುವೆಯಾಗಿದ್ದರೆ ಲಕ್ಷಾಂತರ ವರದಕ್ಷಿಣೆ ಸಿಗುತ್ತಿತ್ತು, ಮನೆಕಟ್ಟುತ್ತಿದ್ದೇನೆ ಈಗಲಾದರೂ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಗ್ಗೆ ಎರಡು ಮೂರುಬಾರಿ ನ್ಯಾಯ ಪಂಚಾಯ್ತಿಯೂ ನಡೆದಿತ್ತು. ಮಗಳನ್ನು ಸಮಾಧಾನ ಮಾಡಿ ತವರಿಂದ ಕಳುಹಿಸಿಕೊಟ್ಟಿದ್ದರು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ತಾಯಿಯೊಂದಿಗೆ ತನ್ನ ಸಂಕಷ್ಟವನ್ನು ನಿರ್ಮಲ ಹೇಳಿಕೊಂಡಿದ್ದಳು. ಆದರೆ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಬಡವಿ ತಾಯಿ ತೆರೇಸಮ್ಮ ಏನೂ ಮಾಡಲಾಗದೆ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಮಗಳನ್ನು ಸಮಾಧಾನಿಸುತ್ತಲೇ ಬಂದಿದ್ದರು.
ರಕ್ಷಿಸುವಂತೆ ಕೋರಿ ತಾಯಿಗೆ ಪೋನ್ ಕರೆ
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಿರ್ಮಲ ತನ್ನ ತಾಯಿಗೆ ಪೋನ್ ಮಾಡಿ ನನಗೆ ಹಣ ತರುವಂತೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಗಂಡ ಹೊಡೆದಿದ್ದಾರೆ. ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಶಾಲೆಯಲ್ಲಿ ಬಿಸಿಯೂಟ ತಯಾರಿ ಮಾಡುತ್ತಿದ್ದ ತೆರೇಸಮ್ಮನವರು ಮಗಳಿಗೆ ಸಮಾಧಾನ ಹೇಳಿ. ಆಮೇಲೆ ಬರುತ್ತೇನೆ ಎಂದು ಹೇಳಿ ಪೋನ್ ಕಟ್ ಮಾಡಿದ್ದರು. ಶಾಲೆಯ ಮಧ್ಯಾಹ್ನದ ಅಡುಗೆ ಕೆಲಸ ಮುಗಿದ ನಂತರ ಮಗಳಿಗೆ ಪೋನ್ ಮಾಡಿದರೆ ಸ್ವಿಚ್ಆಫ್ ಆಗಿತ್ತು. ಗಾಬರಿಯಾಗಿ ಕೂಡ್ಲೂರಿನ ಮಗಳ ಮನೆಯ ಅಕ್ಕಪಕ್ಕದವರಿಗೆ ಫೋನ್ ಮಾಡಿದಾಗ ಮಗಳ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಪತ್ನಿ ನಿತ್ಯನಿರ್ಮಲ ಲೋ ಬಿಪಿ ಯಿಂದ ಸಾವನ್ನಪ್ಪಿದ್ದಾಳೆಂದು ಹೇಳಿದ್ದು, ತರಾತುರಿಯಲ್ಲಿ ಅಂತ್ಯ ಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದರು.
ತಾಯಿಗೂ ತಿಳಿಸದೇ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿತ್ತು. ಹಾಗಾಗಿ ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಶವವನ್ನು ಸೂಕ್ಷ್ಮವಾಗಿ ಗಮನಿಸಿದ ವೇಳೆ ಕುತ್ತಿಗೆ ಬಿಗಿದು ಗಾಯವಾಗಿರುವುದು ಪತ್ತೆಯಾಗಿತ್ತು. ಅನುಮಾನಗೊಂಡ ತೆರೇಸಮ್ಮ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದಲ್ಲದೇ, ಮಾಹಿತಿ ನೀಡದೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ, ಮಗಳ ಸಾವಿಗೆ ಗಂಡನ ಮನೆಯವರೇ ಕಾರಣವೆಂದು ದೂರು ನೀಡಿದ ಮೇರೆಗೆ ಎಸ್.ಐ.ರಾಧ, ತಹಸೀಲ್ದಾರ್ ಮಂಜುನಾಥ್ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರಿನ ಕೆ,ಆರ್. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದು, ತಿಪಟೂರಿನ ಸಣ್ಣೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದವರು ತಿಳಿಸಿದರು.
ತಾಯಿ-ಮಗ ನ್ಯಾಯಾಂಗ ಬಂಧನಕ್ಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಂಥೋಣಿಕಿರಣ್ ಮತ್ತು ಆತನ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಂಥೋಣಿ ಕಿರಣ್ ಮತ್ತವರ ತಾಯಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.