ಮೈಸೂರು, ಅಕ್ಟೋಬರ್ 25: ರಾಜಕೀಯದಲ್ಲಿ ವಿಲನ್ ಅಂತ ಇದ್ದರೆ ಅದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರ ಬೀಳುವಾಗ ಅಮೆರಿಕದಲ್ಲಿದ್ರು, ಅದಕ್ಕೆ ಏನು ಹೇಳಬೇಕು? ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟೆಂಡ್ನಲ್ಲೇ ಕಾಲ ಕಳೆದರು. ವಿಧಾನಸಭೆಯಲ್ಲಿ ಬಿಜೆಪಿಯವೇ ಸರ್ಕಾರ ಬೀಳಿಸಿದ್ದು ಅಂತಾ ಹೇಳಿದ್ದರು. ಅಸೆಂಬ್ಲಿಯಲ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸಚಿವರು, ಶಾಸಕರನ್ನು ಭೇಟಿ ಮಾಡದೆ ಹೋಟೆಲ್ನಲ್ಲಿ ಕುಮಾರಸ್ವಾಮಿ ಕೂತಿದ್ದರು. ರಾಜಕೀಯವಾಗಿ ಹತಾಶೆರಾಗಿ ಬಾಯಿಗೆ ಬಂದ ರೀತಿ ಮಾತಾಡುತ್ತಿದ್ದಾರೆ. ಬಿಜೆಪಿಗಿಂತ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ. ಇವರು ಅವರ ಮೇಲೆ ಅವರು ಇವರ ಮೇಲೆ ಡಿಪೆಂಡ್ ಆಗಿದ್ದಾರೆ. ಖಾಲಿ ಡಬ್ಬ ಮಾತ್ರ ಶಬ್ದ ಮಾಡುತ್ತೆ, ತುಂಬಿದ ಕೊಡ ತುಳುಕುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದರೊಂದಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನೇರವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಆರಂಭಿಸಿದಂತಾಗಿದೆ.