– ಕಲಿಸು ಫೌಂಡೇಶನ್ ಆರಂಭಿಸಿದ 100ನೇ ಗ್ರಂಥಾಲಯ
– ಸಂಸದ ಯದುವೀರ್ ಒಡೆಯರ್ ಅವರಿಂದ ಉದ್ಘಾಟನೆ
ಪ್ರತಿನಿಧಿ ವರದಿ ಮೈಸೂರು
ದೇಶದ ಪ್ರತಿಯೊಂದು ಶಾಲೆಗಳಲ್ಲಿ ಉನ್ನತ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಅವಶ್ಯಕತೆ ಇದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕಲಿಸು ಫೌಂಡೇಶನ್ ವತಿಯಿಂದ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗ್ರಂಥಾಲಯ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ಕಲಿಯಬೇಕು. ಅಲ್ಲದೇ ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಶಾಲೆಗಳಲ್ಲಿ ಉನ್ನತ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಅವಶ್ಯಕತೆ ಇದೆ ಎಂದ ಅವರು, ನೂತನ ಗ್ರಂಥಾಲಯದಲ್ಲಿ ಅಳವಡಿಸಿರುವ ಸ್ಮಾರ್ಟ್ ಟಿವಿ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನೀತಿ ಕಥೆಯನ್ನು ಹೇಳಿದರು.
ಕಲಿಸು ಫೌಂಡೇಷನ್ ಸಂಸ್ಥಾಪಕ ನಿಖಿಲೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಕಾ ವಾತಾವರಣ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಕಲಿಸು ಫೌಂಡೇಷನ್ನ ಕಾರ್ಯ ವ್ಯಾಪ್ತಿಯನ್ನು ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ವಿಸ್ತರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಜವರೇಗೌಡ, ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು, ಕೆಎಸ್ ಪ್ರಾಜೆಕ್ಟ್ ಮುಖ್ಯಸ್ಥರಾದ ರೇವಣ್ಣ, ನಾಗಶ್ರೀ, ಆಪರೇಷನ್ ಮ್ಯಾನೇಜರ್ ಕೆ.ಎಸ್. ಮನೋಜ್, ಎಂ.ಎಂ. ವಿಘ್ನೇಶ್, ಮಹೇಶ್ ತಳವಾರ, ಸಲಹಾ ಮಂಡಳಿ ಸದಸ್ಯ ಎಂ.ಸಿ. ಮಲ್ಲಿಕಾರ್ಜುನ್, ಶಾಲೆಯ ಮುಖ್ಯ ಶಿಕ್ಷಕ ಲೋಹಿತೇಶ್ವರ ಇತರರಿದ್ದರು.