ಮೈಸೂರು: “ ಬಡವರಿಗೆ ನೀಡುವ ಉಚಿತ ಯೋಜನೆಗಳ ಬಗ್ಗೆ ಮಾತನಾಡುವ ನಾರಾಯಣಮೂರ್ತಿ ಅವರು, ಕಾರ್ಪೊರೇಟ್ ಸಂಸ್ಥೆಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಏಕೆ ಖಂಡಿಸಿಲ್ಲ” ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಸರ್ಕಾರದ ಉಚಿತ ಯೋಜನೆಗಳನ್ನು ಖಂಡಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು “ಬಡವರ ಕಷ್ಟ ಗೊತ್ತಿಲ್ಲ. ಹಾಗಾಗಿ ಉಚಿತ ಕೊಡುಗೆಗಳನ್ನು ನೀಡದಂತೆ ಹೇಳಿದ್ದಾರೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ” ಎಂದು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದೇ ವಿಷಯಕ್ಕೆ ಸಚಿವ ಮಂಕಾಳ ಕೂಡ ಪ್ರತಿಕ್ರಿಯಿಸಿದ್ದು, “ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ನಾವು ಸಾಮಾನ್ಯ ಜನರ ಪರ ಕೆಲಸ ಮಾಡ್ತಿದ್ದೇವೆ, ಜನರಿಗಿಂತ ಯಾರೂ ನಮಗೆ ದೊಡ್ಡವರಲ್ಲ. ಅವರು ಎಷ್ಟೇ ದೊಡ್ಡವರು ಇರಲಿ. ನಾವು ಜನಸಾಮಾನ್ಯ ಕೆಲಸ ಮಾಡುತ್ತಿದ್ದೇವೆ. ನಮಗೆ ಜನರು ಮುಖ್ಯ. ಜನರು ಏನು ಹೇಳುತ್ತಾರೋ ಅವರ ಮಾತನ್ನು ಮಾತ್ರ ಕೇಳುತ್ತೇವೆ” ಎಂದು ಟಾಂಗ್ ನೀಡಿದ್ದಾರೆ.
ನಾರಾಯಣಮೂರ್ತಿ ಹೇಳಿದ್ದೇನು?
2023ರ ಸಾಲಿನ 26ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ನಾರಾಯಣ ಮೂರ್ತಿ “ಯಾವುದನ್ನೂ ಉಚಿತವಾಗಿ ನೀಡಬಾರದು. ಸಬ್ಸಿಡಿ ಪಡೆದುಕೊಂಡವರು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸಕ್ಕೆ ಬದ್ಧರಾಗಿರಬೇಕು ಎಂದು ಹೇಳಿದ್ದರು. ಇನ್ನು ದೇಶದಲ್ಲಿ ಶ್ರೀಮತರಿಗೆ ಸರ್ಕಾರ ಹೆಚ್ಚು ತೆರಿಗೆ ವಿಧಿಸುವುದನ್ನು ಸಮರ್ಥಿಸಿಕೊಂಡಿದ್ದರು. ಶ್ರೀಮಂತ ಉದ್ಯಮಿಗಳು ಅಧಿಕ ಪ್ರಮಾಣದ ತೆರಿಗೆಯನ್ನು ಒಪ್ಪಿಕೊಳ್ಳಬೇಕು . ನಮ್ಮ ದೇಶದಲ್ಲಿ ಭ್ರಷ್ಟಮುಕ್ತ ಪರಿಣಾಮಕಾರಿ ಸಾರ್ವಜನಿಕ ಸರಕನ್ನು ರಚಿಸಬೇಕಾದರೆ ಬೇರೆ ಮುಂದುವರಿದ ದೇಶಗಳಿಗಿಂದ ಇಲ್ಲಿ ಹೆಚ್ಚಿನ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದರು.