ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗು ಅವರ ಪುತ್ರನ ಕಿರುಕುಳದಿಂದ ಬೇಸತ್ತು ಪೊಲೀಸ್ ಅಧಿಕಾರಿ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹಾಗು ಜೆಡಿಎಸ್ ಕಾರ್ಯಾಧ್ಯಕ್ಷ ಸಾ ರಾ ಮಹೇಶ್ ಆರೋಪಿಸಿದ್ದಾರೆ.
ವರ್ಗಾವಣೆ ಆದ ಕೇವಲ ಏಳು ದಿನಗಳಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಿತ್ತು.ಆದರೆ ಈವರೆಗೂ ಬಂಧಿಸಿಲ್ಲ. ಗೃಹ ಸಚಿವರೊಬ್ಬರು ಪ್ರಾಮಾಣಿಕರಾಗಿದ್ದರೇ ಮಾತ್ರ ಸಾಲದು.ಅವರ ಸುತ್ತಲೂ ಇರುವವರು ಪ್ರಾಮಾಣಿಕರಾಗಿರಬೇಕು.ಈ ಹಿಂದಿನ ಯಾವುದೇ ಸರ್ಕಾರ ಪೊಲೀಸ್ ಇಲಾಖೆಯನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ವಿರುದ್ದ ಆರೋಪಿಸಿದ ಇವರು ಈ ಕೂಡಲೇ ಶಾಸಕ ಹಾಗು ಪುತ್ರನನ್ನು ಬಂಧಿಸಿ ಕ್ರಮಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಎಸ್ ಐ ಟಿ ಹೆಸರನ್ನು ಎಸ್ ಎಸ್ ಐ ಟಿ ಎಂದು ಬದಲಿಸಬೇಕಿದೆ ಕಾರಣ ಎಸ್ ಎಸ್ ಐ ಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ವಿಶೇಷ ತನಿಖಾ ಸಂಸ್ಥೆ ಎಂದರ್ಥಎಂದು ಎಸ್ ಐ ಟಿ ಕುರಿತು ಮಾಜಿ ಸಚಿವ ಸಾ ರಾ ಮಹೇಶ್ ವ್ಯಂಗ್ಯ ಮಾಡಿದ್ದಾರೆ.
ಇನ್ನೂ ಹೆಚ್ ಡಿ ಕುಮಾರಸ್ವಾಮಿ ಅವರ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆಸಾ ರಾ ಮಹೇಶ್ ತಿರುಗೇಟು ನೀಡಿದ್ದು, 2006ರಲ್ಲಿ ಜಮೀರ್ ಅಣ್ಣಾ ಬಸ್ ಓಡಿಸಿಕೊಂಡು ಬಂದವರು.ನಿಮ್ಮನ್ನು ಶಾಸಕ, ಸಚಿವರನ್ನಾಗಿ ಮಾಡಿದ್ದು ದೇವೇಗೌಡರು,ಮತ್ತು ಕುಮಾರಸ್ವಾಮಿಯವರು. ಆದರೆ ಪಕ್ಷ ಬದಲಿಸಿದ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡಿದರೆ ಆಗುತ್ತಾ ಎಂದಿದ್ದಾರೆ. ಈಗಾಗಲೇ ಮಂತ್ರಿ ಆಗಿದ್ದೀರಿ, ಈ ರೀತಿಯಾದ ಹೇಳಿಕೆಗಳಿಂದ ಇನ್ಯಾರನ್ನು ಓಲೈಸಬೇಕು ಎಂದು ಜಮೀರ್ ಅಹಮದ್ ವಿರುದ್ದ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಥಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ ಟಿ ಚೆಲುವೇಗೌಡ, ಮಾಜಿ ಮೇಯರ್ ಗಳಾದ ಆರ್ ಲಿಂಗಪ್ಪ, ಎಂ ಜೆ ರವಿಕುಮಾರ್ ಸೇರಿದಂತೆ ಕೆಲ ಮಾಜಿ ನಗರಪಾಲಿಕೆ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.