ಚಿಕ್ಕಬಳ್ಳಾಪುರ : ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಕೆ ಸುಧಾಕರ್ , ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ ವೇದನೆ ಕಡಿಮೆ ಮಾಡುವಂತೆ ಟಿಕೆಟ್ ಘೋಷಣೆಗೂ ಮುನ್ನ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಮೇ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಮಾತನಾಡಿದ ಸುಧಾಕರ್, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ನನ್ನ ವೇದನೆ ಕಡಿಮೆ ಮಾಡಿ. ಇನ್ನೇನು ಎರಡು ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಆಗುತ್ತದೆ. ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಈ ಸಲ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಡಿ ಎಂಬ ಬೆಂಬಲಿಗರಿಗೆ ಮನವಿ ಮಾಡಿದರು.