ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆ ಆಗಿರುವ ನಟಿ ಕಂಗನಾ ರಣಾವತ್ ಅವರ ಮೇಲೆ ಭದ್ರತಾ ಸಿಬ್ಬಂದಿ ಕೈ ಮಾಡಿದ್ದಾರೆ. ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲ್ವಿಂದರ್ ಕೌರ್ ಎಂಬ ಮಹಿಳಾ ಕಾನ್ಸ್ಟೇಬಲ್ ಈ ಕೃತ್ಯ ಎಸಗಿದ್ದಾರೆ. ಕಂಗನಾ ರಣಾವತ್ಗೆ ಕಪಾಳ ಮೋಕ್ಷ ಮಾಡಿರುವ ಘಟನೆಯಿಂದ ಎಲ್ಲರಿಗೂ ಶಾಕ್ ಆಗಿದೆ. ಈ ಬಗ್ಗೆ ಕಂಗನಾ ಅವರು ವಿಡಿಯೋ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ನಮಸ್ತೆ ಸ್ನೇಹಿತರೇ.. ನನ್ನ ಹಿತೈಷಿಗಳು ಮತ್ತು ಮಾಧ್ಯಮದವರಿಂದ ಅನೇಕ ಫೋನ್ ಕರೆಗಳು ಬರುತ್ತಿವೆ. ನಾನು ಸುರಕ್ಷಿತವಾಗಿದ್ದೇನೆ. ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್ ವೇಳೆ ಈ ಘಟನೆ ನಡೆಯಿತು. ನಾನು ಸೆಕ್ಯುರಿಟಿ ಚೆಕ್ ಮುಗಿಸಿ ಮುಂದೆ ತೆರಳುವಾಗ ಪಕ್ಕದ ಕ್ಯಾಬಿನ್ನಲ್ಲಿ ಇದ್ದ ಸಿಐಎಸ್ಎಫ್ (CISF) ಭದ್ರತಾ ಸಿಬ್ಬಂದಿ ಬಂದು ನನ್ನ ಮುಖಕ್ಕೆ ಹೊಡೆದರು. ಅಲ್ಲದೇ ನನಗೆ ಬೈಯ್ಯಲು ಶುರು ಮಾಡಿದರು. ಯಾಕೆ ಹೀಗೆ ಮಾಡಿದ್ರಿ ಅಂತ ನಾನು ಅವರಿಗೆ ಕೇಳಿದೆ. ರೈತರ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಅವರು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್ನಲ್ಲಿ ಹೆಚ್ಚುತ್ತಿರುವ ಉಗ್ರವಾದ ಮತ್ತು ಆತಂಕವಾದವನ್ನು ನಾವು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ನನ್ನ ಕಳಕಳಿ ಇರುವುದು. ಧನ್ಯವಾದ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.