ಬೆಂಗಳೂರು: ರಾಜ್ಯದ ಹಣಕಾಸು ವ್ಯವಸ್ಥೆಯ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ನೇಮಕ ಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಸುತ್ತ ತಜ್ಞ ಅಧಿಕಾರಿಗಳು ಇದ್ದರೂ ವಿದೇಶಿ ಕನ್ಸಲ್ಟೆನ್ಸಿ ನೇಮಕ ಮಾಡಲಾಗಿದೆ. ಕಳೆದ 1 ವರ್ಷದಿಂದ ಸರ್ಕಾರ ಎಲ್ಲಾ ವಿಧದಲ್ಲೂ ವಿಫಲ ಆಗಿದೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಇಲ್ಲ, ಹೂಡಿಕೆ ಬಂದಿಲ್ಲ. ಕರ್ನಾಟಕ ರಾಜ್ಯ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಳಲುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಹಣಕಾಸು ವ್ಯವಸ್ಥೆಯ ಮೇಲುಸ್ತುವಾರಿಗೆ ಯಾಕೆ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದ ಸೂಕ್ತ ವ್ಯಕ್ತಿಯನ್ನು ಗುರುತಿಸಲಿಲ್ಲ? ವಿದೇಶಿ ತಜ್ಞರು ಸಹಕಾರ ನೀಡುತ್ತಾರೆ ಅಂತಾ ನನಗೆ ಅನ್ನಿಸುತ್ತಿಲ್ಲ ಎಂದು ವಿಜಯೇಂದ್ರ ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ಶಾಸಕ ಬಿಪಿ ಹರೀಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಶಾಸಕ ಮಿತ್ರ ಹರೀಶ್ ಆಗಲೀ ಅಥವಾ ಬೇರೆ ಯಾರೇ ಆಗಲಿ ಅವರಿಗೆ ಒಂದು ಮಾತು ಹೇಳುತ್ತೇನೆ. ಬಹಿರಂಗವಾಗಿ ಹೇಳಿಕೆ ಕೊಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂದರೆ ಹೇಳಲಿ, ನನ್ನದೇನೂ ತಕರಾರಿಲ್ಲ. ಆದರೆ ನಾನು ರಾಜ್ಯಾಧ್ಯಕ್ಷ ಆಗಿ, ಏನೇ ಸಮಸ್ಯೆ ಇದ್ದರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.
ಈ ರೀತಿಯ ಹೇಳಿಕೆಗಳನ್ನು ಕೊಡುವುದರಿಂದ ಪಕ್ಷಕ್ಕೂ ಲಾಭ ಆಗಲ್ಲ, ಸಂಘಟನೆಗೂ ಲಾಭ ಆಗಲ್ಲ. ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಆಗುತ್ತಿಲ್ಲ, ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ಏತನ್ಮಧ್ಯೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧೆ ಸಾಧ್ಯತೆ ಬಗ್ಗೆ ಮಾತನಾಡಿ, ಅವರು ಈಗಾಗಲೇ ಶಾಸಕರಾಗಿದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲಿಸುವವರೇ ಇಲ್ಲ ಅಂದುಕೊಂಡಿದ್ದರು. ಆದರೆ ಜನರ ತೀರ್ಪು ಏನಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.