ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತಿರುವುದು ಸಂತೋಷದ ವಿಚಾರ. ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವುದಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಪಟ್ಟಣದ ಅವರ ನಿವಾಸದಲ್ಲಿ ಮಾತನಾಡಿ, ಪ್ರಸ್ತುತ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದ ಸಂಸದೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವರನ್ನು ಬೆಂಬಲಿಸಿತ್ತು. ಈಗ ಸುಮಲತಾ ಅವರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರೊಂದು ರೀತಿ ಬಿಜೆಪಿ ಪಕ್ಷದ ಸಂಸದೆಯೇ ಆಗಿದ್ದಾರೆ.
ಹಾಗಾಗಿ ಮುಂಬರುವ ಚುನಾವಣೆಯಲ್ಲೂ ಸುಮಲತಾ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚೇನೂ ಇಲ್ಲ. ಹಿಂದೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರು. ಈಗ ಒಂದೇ ಕ್ಷೇತ್ರದಲ್ಲಿ ಜೆಡಿಎಸ್ ಉಳಿದುಕೊಂಡಿದೆ. ಜಿಲ್ಲೆಯೊಳಗೆ ಸುಮಲತಾ ಅವರ ಪ್ರಭಾವ ಹೆಚ್ಚಿದೆ. ಅಂಬರೀಶ್ ಅಣ್ಣನ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಆದ ಕಾರಣ ಸುಮಲತಾ ಅವರಿಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ನಾನೂ ಸುಮಲತಾ ಅವರ ಪರವಾಗಿಯೇ ನಿಲ್ಲುತ್ತೇನೆ ಎಂದರು.