ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಈ ಬಗ್ಗೆ ಟೀಕೆ ಕೇಳಿಬಂದರೂ ಭಾರತದಲ್ಲಿ ಹಾಲಿನ ಸಂಸ್ಥೆಯೊಂದು ಈ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ. ಕೆಎಂಎಫ್ನ 50 ವರ್ಷದ ಮೈಲಿಗಲ್ಲಿನಲ್ಲಿ ಇಂಥದ್ದೊಂದು ಬೆಳವಣಿಗೆ ಆಗಿದೆ. ಕರ್ನಾಟಕ ಹಾಲು ಒಕ್ಕೂಟ ಆರಂಭವಾಗಿ 50 ವರ್ಷ ಆಗಿದೆ. ವಿಶ್ವಬ್ಯಾಂಕ್ನ ಡೈರಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಹಾಯವಾಗಿ 1974-75ರಲ್ಲಿ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿತ್ತು. ಹತ್ತು ವರ್ಷದ ಬಳಿಕ ಅಂದರೆ 1984ರಲ್ಲಿ ಇದರ ಹೆಸರನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ ಅಥವಾ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಎಂದು ಬದಲಿಸಲಾಯಿತು. ಕೆಎಂಎಫ್ನಲ್ಲಿ ಇವತ್ತು ರಾಜ್ಯದ ವಿವಿಧ 14 ಹಾಲು ಒಕ್ಕೂಟಗಳು ಒಳಗೊಂಡಿವೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಲು ಸಹಕಾರ ಸಂಸ್ಥೆಗಳಿದ್ದು ಬೃಹತ್ ನೆಟ್ವರ್ಕ್ ಆಗಿ ರೂಪುಗೊಂಡಿದೆ. ಇವತ್ತು ಗುಜರಾತ್ ಮೂಲದ ಅಮೂಲ್ ಬಿಟ್ಟರೆ ಭಾರತದಲ್ಲಿ ಅತಿದೊಡ್ಡ ಹಾಲಿನ ಒಕ್ಕೂಟ ಕೆಎಂಎಫ್ ಆಗಿದೆ. ಇದರ ವಾರ್ಷಿಕ ವಹಿವಾಟು 14,018 ಕೋಟಿ ರೂ ಇದೆ.
ಕೆಎಂಎಫ್ನ ನಂದಿನಿ ಬ್ರ್ಯಾಂಡ್ ಶುರುವಾಗಿದ್ದು…
ನಂದಿನಿ ಎಂಬುದು ಕೆಎಂಎಫ್ ಉತ್ಪನ್ನಗಳ ಕಾರ್ಪೊರೇಟ್ ಬ್ರ್ಯಾಂಡಿಂಗ್ ಆಗಿದೆ. 1983ರಲ್ಲಿ ನಂದಿನಿ ಹೆಸರನ್ನು ತನ್ನ ಉತ್ಪನ್ನಗಳ ಬ್ರ್ಯಾಂಡ್ ಆಗಿ ಕೆಎಂಎಫ್ ಘೋಷಿಸಿತು. ನಂದಿನಿ ಎಂಬುದು ಹಿಂದೂ ದೇವತೆಯ ಹೆಸರು. ಹಾಗೆಯೇ ಗೋವಿನ ಹೆಸರುಗಳಲ್ಲಿ ಒಂದು. ಹೀಗಾಗಿ, ನಂದಿನಿ ಹೆಸರನ್ನು ಆಯ್ಕೆ ಮಾಡಲಾಗಿದೆ.
ಅಮೂಲ್ ವರ್ಸಸ್ ಕೆಎಂಎಫ್
ಅಮೂಲ್ ಗುಜರಾತ್ ಮೂಲದ ಹಾಲು ಒಕ್ಕೂಟ. ಆನಂದ್ ಮಿಲ್ಕ್ ಯೂನಿಯನ್ ಲಿ ಎಂಬುದು ಇದರ ವಿಸ್ತೃತ ರೂಪ. ಇಲ್ಲಿ ಆನಂದ್ ಎಂಬುದು ಗುಜರಾತ್ನ ಒಂದು ರಾಜ್ಯ. ಸ್ವಾತಂತ್ರ್ಯಕ್ಕೆ ಮುನ್ನ 1946ರಲ್ಲಿ ಟಿಕೆ ಪಟೇಲ್ ಎಂಬುವರು ಈ ಹಾಲು ಒಕ್ಕೂಟವನ್ನು ಸ್ಥಾಪಿಸಿದ್ದರು. ಇವತ್ತು ದೇಶದ ಅತಿದೊಡ್ಡ ಹಾಲು ಸಹಕಾರ ಒಕ್ಕೂಟ ಸಂಸ್ಥೆಯಾಗಿದೆ. ಇದರ ವಾರ್ಷಿಕ ಆದಾಯ 50,000 ಕೋಟಿ ರೂ ದಾಟಿದೆ. ಗುಜರಾತ್ ರಾಜ್ಯ ಮಾತ್ರವಲ್ಲ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳ ಕೆಲ ಪ್ರದೇಶಗಳಿಂದಲೂ ರೈತರಿಂದ ಅಮೂಲ್ ಹಾಲು ಸಂಗ್ರಹಿಸುತ್ತದೆ. ಹಲವು ರಾಜ್ಯಗಳಲ್ಲಿ ಇದರ ಮಾರುಕಟ್ಟೆ ಇದೆ. ವಿದೇಶಗಳಲ್ಲೂ ಅಮೂಲ್ ಉತ್ಪನ್ನಗಳು ಸಿಗುತ್ತವೆ.