ಏ.7 ರಂದು ಗೋಣಿಕೊಪ್ಪಲಿನಲ್ಲಿ ಆಟಗಾರರ ಬಿಡ್ಡಿಂಗ್
ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪ್ರಸಕ್ತ ಸಾಲಿನ ಮೇ 1 ರಿಂದ 15 ರವರೆಗೆ ನಗರದ ಜಿಲ್ಲಾ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಪಂದ್ಯಾವಳಿ ನಡೆಯಲಿದೆಯೆಂದು ಫೌಂಡೇಶನ್ನ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಂದ್ಯಾವಳಿ ಟಿ-20 ಮಾದರಿಯಲ್ಲಿ ನಡೆಯಲಿದ್ದು, ಹತ್ತು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಈಗಾಗಲೆ ಸುಮಾರು 200 ಕ್ರಿಕಟ್ ಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಆಟಗಾರರ ಬಿಡ್ಡಿಂಗ್ ಏ.7ರಂದು ಗೋಣಿಕೊಪ್ಪಲಿನ ಅಶುರಾ ಕೂರ್ಗ್ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಪಂದ್ಯಾವಳಿ ವಿಜೇತ ತಂಡಕ್ಕೆ 1.50 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 75 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ 25 ಸಾವಿರ ರೂ. ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ ಪ್ರತಿ ಪಂದ್ಯದಲ್ಲೂ ವೈಯಕ್ತಿಕ ಬಹುಮಾನಗಳು ಇರುತ್ತದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ನಿರ್ದೇಶಕರುಗಳಾದ ಕುಲ್ಲೇಟಿರ ಶಾಂತ ಕಾಳಪ್ಪ, ಕಿರಣ್ ಟಿ.ಬಿ, ಪಾಲಚಂಡ ಜಗನ್ ಉತ್ತಪ್ಪ, ಮಡ್ಲಂಡ ದರ್ಶನ್ ಪೆಮ್ಮಯ್ಯ ಹಾಗೂ ಡಾ.ಚೆರುಮಂದಂಡ ಸೋಮಣ್ಣ ಉಪಸ್ಥಿತರಿದ್ದರು. ಫೋಟೋ :: ಕ್ರಿಕೆಟ್
ಬೇಕಾದರೆ ಮಾತ್ರ ಬಳಸಿಕೊಳ್ಳಿ….
ಪಾಲ್ಗೊಳ್ಳುವ ಫ್ರಾಂಚೈಸಿಗಳು- ಪಂದ್ಯಾವಳಿಯಲ್ಲಿ ಮುಕ್ಕಾಟಿರ ಮ್ಯಾಕ್ ತಿಮ್ಮಯ್ಯ, ಅವರೆಮಾದಂಡ ಶರಣ್ ಪುಣಚ್ಚ ಮತ್ತು ಪಾಡಿಯಂಡ ದೀಪಕ್ ತಿಮ್ಮಯ್ಯ ಮಾಲೀಕತ್ವದ ‘ ಕೊಡವ ಟ್ರೈಬ್’ ತಂಡ, ಪಾಲಚಂಡ ಜಗನ್ ಉತ್ತಪ್ಪ ಅವರ ‘ವೈಲ್ಡ್ ಫ್ಲಾವರ್’, ಕಾಡ್ಯಮಾಡ ಅಭಿಷೇಕ್, ಮೇರಿಯಂಡ ನಿಖಿಲ್ ಬೋಪಯ್ಯ ಮತ್ತು ಪ್ರಣಂ ಮಾಲೀಕತ್ವದ ‘ಕೂರ್ಗ್ ಬ್ಲಾಸ್ಟರ್ಸ್’, ಮಾದಂಡ ತಿಮ್ಮಯ್ಯ, ಚೇಂದಂಡ ನವೀನ್ ಅವರ ‘ಟೀಂ ಪ್ರಗತಿ’, ಚಕ್ಕೇರ ಚಂದ್ರಪ್ರಕಾಶ್, ತೀತಿರ ರೋಷನ್ ಅಪ್ಪಚ್ಚು , ಚಕ್ಕೇರ ಆಕಾಶ್ ಮಾಲೀಕತ್ವದ ‘ಅಂಜಿಗೇರಿ ನಾಡ್’ ತಂಡ, ಬೊಪ್ಪಂಡ ಸೂರಜ್ ಗಣಪತಿ ಅವರ ‘ಟೀಂ ಲೇವರೇಜ್’, ತಂಬುಕುತ್ತೀರ ಮಧು ಮಂದಣ್ಣ ಅವರ ‘ರಾಯಲ್ ಟೈಗರ್ಸ್’, ತಂಬುಕುತ್ತೀರ ರಾಣಿ ಮತ್ತು ತ್ಯಾಗಿ ಮಾಲಿಕತ್ವದ ‘ಎಂಟಿಬಿ ರಾಯಲ್ಸ್’, ಮುಂಡ್ಯೋಳಂಡ ನಂದಾ ನಾಣಯ್ಯ, ಪರವಂಡ ಹೇಮಂತ್, ಮಿಥುನ್ ಮತ್ತು ಬಾಚೆಟ್ಟಿರ ತೇಜಸ್ವಿ ಮಾಲೀಕತ್ವದ ಕೊಡವ ವಾರಿಯರ್ಸ್ ಮತ್ತು ಚೆಟ್ಟಿಯಾರಂಡ ನಿಲನ್ ಗಣಪತಿ, ಕೋಟೇರ ಸುನಿಲ್, ಐಚೋಡಿಯಂಡ ಜೋಯಪ್ಪ ಮಾಲೀಕತ್ವದ ‘ಕೂರ್ಗ್ ಯುನೈಟೆಡ್’ ತಂಡಗಳು ಪಾಲ್ಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.