ಒಂದೂವರೆ ತಿಂಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ತೀವ್ರಗತಿಯಲ್ಲಿ ಕುಸಿದಿದ್ದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಇದೀಗ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ. ಇದರ ನಡುವೆಯೂ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲುಗಡೆಯಾಗದಿರುವುದು ಆತಂಕಕ್ಕೂ ಕಾರಣವಾಗಿದೆ. ಕೇರಳ ಮತ್ತು ಕೊಡಗಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿರುವುದರಿಂದ ಕಳೆದೆರಡು ದಿನಗಳಿಂದ ಕೆಆರ್ಎಸ್ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಏರಿಕೆ ಕಂಡು ಬಂದಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ ಮತ್ತೆ ನೂರು ಅಡಿ ತಲುಪಿದೆ.
ಬುಧವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ 100.36 ಅಡಿ ತಲುಪಿದೆ. ಒಳಹರಿವಿನ ಪ್ರಮಾಣ 9052 ಕ್ಯುಸೆಕ್ ನಷ್ಟಿದೆ. ನಾಲೆಗಳಿಗೂ ಸೇರಿದಂತೆ ಒಟ್ಟು 1482 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ. ಇದರಿಂದ ಕೆಆರ್ಎಸ್ ಒಳಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ ಹಾರಂಗಿ, ಹೇಮಾವತಿ ಜಲಾಶಯದಿಂದಲೂ ಸ್ವಲ್ಪ ಪ್ರಮಾಣದ ನೀರನ್ನು ಕೆಆರ್ಎಸ್ ಜಲಾಶಯಕ್ಕೆ ಹರಿಸಿಕೊಳ್ಳಲಾಗುತ್ತಿರುವುದರಿಂದ ಎಲ್ಲ ನೀರು ಸೇರಿ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಹಾರಂಗಿಯಿಂದ 1000 ಕ್ಯುಸೆಕ್ ಹೇಮಾವತಿ ಜಲಾಶಯದಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರಮಾಣದ ನೀರನ್ನು ಹರಿಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.