ಮೈಸೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಮೊದಲು ಎಫ್.ಎಸ್.ಎಲ್ ವರದಿ ಬಹಿರಂಗ ಮಾಡಿ. ನೀವು ತಡ ಮಾಡಿದಷ್ಟು ನೀವು ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಜಾಸ್ತಿಯಾಗುತ್ತೆ. ವರದಿ ಬರುವ ಮುನ್ನವೇ ಕೆಲ ಸಚಿವರು ಅಂಥಹ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಹೀಗಾಗಿ ವರದಿಗೆ ಏನು ಬೆಲೆ. ನಮ್ಮ ಪ್ರಕಾರ ಎಫ್ಎಸ್ಎಲ್ ವರದಿ ಬಂದಿದೆ. ಸರ್ಕಾರ ಅದನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ. ಜನ ನಿಮ್ಮ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲೀಂ ಪರವಾಗಿಯೇ ಇರಿ. ಆದರೆ ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನ ದೇಶ ದ್ರೋಹಿಗಳನ್ನು ರಕ್ಷಿಸ ಬೇಡಿ ಎಂದರು.
ಇದೇ ವೇಳೆ ಜಾತಿಗಣತಿ ವಿಚಾರಕ್ಕೆ ಮಾತನಾಡಿ, ಸಿಎಂಗೆ ತಾಕತ್ ಇದ್ದರೆ ಜಾತಿಗಣತಿಯನ್ನು ಸಂಪುಟದಲ್ಲಿ ಇಡಲಿ. ವಿಧಾನಸೌಧದಲ್ಲಿ ಚರ್ಚೆಗೆ ಇಡಲಿ. ಕಾಂಗ್ರೆಸ್ ನವರೇ ಪರಸ್ಪರ ಹೊಡೆದಾಡಿಕೊಳ್ಳದಿದ್ದರೆ ನೋಡಿ. ಜಾತಿ ಜಾತಿಗಳ ನಡುವೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹಿಂದು ಸಮಾಜವನ್ನು ಜಾತಿ ಹೆಸರಿನಲ್ಲಿ ಹೊಡೆಯುತ್ತಿದ್ದಾರೆ. ನೀವು ಮುಸ್ಲೀಂ ಪರ ಇರಿ. ಬಿಜೆಪಿ ಹಿಂದುಗಳ ಪರ ಇರುತ್ತದೆ ಎಂದು ಹೇಳಿದರು.