ಬೆಂಗಳೂರು, ಮಾರ್ಚ್ 20: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡುವೆ ಅಪಸ್ವರ ಎದ್ದಿದೆ ಎಂಬ ವರದಿಗಳ ಬೆನ್ನಲ್ಲೇ ಆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಜೆಡಿಎಸ್ ಮುನಿಸು ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ನಾಯಕರು ಹೆಚ್ಡಿ ಕುಮಾರಸ್ವಾಮಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿ, ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಕುಮಾರಸ್ವಾಮಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲ ಬೇಡ. ಎಲ್ಲವನ್ನೂ ಕುಳಿತು ಮಾತನಾಡಿ ಬಗೆಹರಿಸೋಣ. ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡುವುದು ಬೇಡ. ನಿಮ್ಮ ಹೃದಯದ ಚಿಕಿತ್ಸೆ ಸುಸೂತ್ರವಾಗಿ ನೆರವೇರಲಿ. ನಿಮ್ಮ ಆರೋಗ್ಯ ಸುಧಾರಿಸಿದ ನಂತರ ಮಾತುಕತೆ ನಡೆಸೋಣ. ಸದ್ಯದ ಮಟ್ಟಿಗೆ ನಿಮ್ಮ ಆರೋಗ್ಯವೇ ಮೊದಲ ಆದ್ಯತೆ ಆಗಿರಲಿ. ನೀವು ಗುಣಮುಖರಾದ ಬಳಿಕ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಮತ್ತು ಪ್ರಧಾನಿ ಮೋದಿ ಅವರನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಮಾಡಿ ಕಾರ್ಯಕ್ರಮ ಮಾಡೋಣ ಎಂದು ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಗೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸುವೆ.