– ಬಿಜೆಪಿ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ
ಪ್ರತಿನಿಧಿ ವರದಿ ಮೈಸೂರು
ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬುದು ಕೇವಲ ಊಹಾಪೋಹಗಳಾಗಿದ್ದು, ಇದನ್ನು ನಂಬಬೇಡಿ. ಸಚಿವರು ಕೊಟ್ಟಿರೋ ಹೇಳಿಕೆಗಳು ಅವರ ವೈಯುಕ್ತಿಕ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ಡಿಎನ್ಎ ಆಗಿದ್ದು, ದಲಿತ ,ರೈತ, ಮಹಿಳಾ ವಿರೋಧಿ ಡಿಎನ್ಎ ಅನ್ನು ಬಿಜೆಪಿ ಹೊಂದಿದೆ. ಲೋಕಸಭಾ ಚುಣಾವಣೆಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕು ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ, ಮುಂದಿನ ಐದು ವರ್ಷ ಕೂಡ ಈ ಯೋಜನೆಗಳು ಮುಂದುವರೆಯಲಿದೆ ಎಂದರು.
ಬಿಜೆಪಿಯವರು ರಾಜ್ಯದ ಮಹಿಳೆಯರು, ಬಡವರಿಗೆ ಅನ್ಯಾಯ ಮಾಡುತ್ತಿದೆ. ಜೂ.4ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದ್ದು, ಮೋದಿ ಅಧಿಕಾರ ಅಂತ್ಯವಾಗಲಿದೆ. ಇದಾದ ನಂತರ ಕೇಂದ್ರದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮಹಾಲಕ್ಷಿ ಯೋಜನೆ ಮೂಲಕ 1 ಲಕ್ಷ ಕೊಡುತ್ತೇವೆ.
ರಾಜ್ಯದ 2 ಸಾವಿರದ ಜೊತೆ ಕೇಂದ್ರದ 8 ಸಾವಿರ ಹಣ ಮಹಿಳೆಯರಿಗೆ ಸಿಗಲಿದ್ದು, ಮಹಿಳೆಯರಿಗೆ ಡಬಲ್ ಧಮಾಕ ಸಿಗಲಿದೆ ಎಂದು ಹೇಳಿದರು.
ವಿವಿ ಪ್ಯಾಟ್ ಎಣಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಭಾರತೀಯ ಪ್ರಜೆಯಾಗಿ ಸುಪ್ರೀಂಕೋರ್ಟ್ಗೆ ಪ್ರಶ್ನೆ ಕೇಳಿದ್ದೇನೆ. ಇವಿಎಂ ಸರಿ ಇದ್ದ ಮೇಲೆ ವಿವಿ ಪ್ಯಾಟ್ ಖರೀದಿಸಿದ್ದು ಏಕೆ? ಇವಿಎಂನಲ್ಲಿ ಸರಿಯಾಗಿ ವೋಟ್ ಆಗಿದ್ದರೆ ವಿವಿ ಪ್ಯಾಟ್ನಲ್ಲಿ 5% ಏಕೆ ಎಣಿಸಬೇಕಾಗಿತ್ತು?. ಕೇವಲ 5% ಮತ ಎಣಿಸಲು ಕೋಟ್ಯಾಂತರ ರೂ. ಖರ್ಚು ಮಾಡಿ ವಿವಿ ಪ್ಯಾಟ್ ಏಕೆ ಖರೀದಿ ಮಾಡಬೇಕಿತ್ತು. ಬಿಜೆಪಿಯವರು ವಿವಿ ಪ್ಯಾಟ್ ಎಣಿಕೆಗೆ ವಿರೋಧಿಸುತ್ತಿರೋದು ಏಕೆ ಎಂದು ಪ್ರಶ್ನೆ ಮಾಡಿದ ಸುರ್ಜೇವಾಲ, ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಿಸಲು ಸಮಿತಿ ಇದೆ. ಆದರೆ ಆ ಸಮಿತಿಯಲ್ಲಿ ಮೋದಿಯವರೇ ಇದ್ದು, ಇವರು ಹೇಳಿದಂತೆ, ನಟಿಸಿದಂತೆ ಚುನಾವಣೆ ಆಯೋಗ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಕೆ. ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್, ಶಾಸಕ ಕೆ. ಹರೀಶ್ ಗೌಡ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ. ಪುಷ್ಪಾ ಅಮರ್ನಾಥ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಮುಖಂಡರಾದ ಎಚ್.ವಿ. ರಾಜೀವ್, ಸೂರಜ್ ಹೆಗಡೆ ಇತರರಿದ್ದರು.
ಚೊಂಬು ಪ್ರದರ್ಶಿಸಿದ ಕೈ ನಾಯಕರು:
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಚೊಂಬು ಪ್ರದರ್ಶಿಸುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದರು. ಮೋದಿ ಮಾಡಲ್ ಅಂದರೆ ಖಾಲಿ ಚೊಂಬು, ಮೋದಿ ಬಳಿ ಕರ್ನಾಟಕ ಬರಗಾಲ ಪರಿಹಾರ ಕೇಳಿದ್ದೇವೆ. ನಾವು ಕೇಳುತ್ತಿರೋದು ಭಿಕ್ಷೆಯಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಬಿಜೆಪಿ 400 ಸೀಟ್ ಕೇಳುತ್ತಿರೋದು ಸಂವಿಧಾನವನ್ನು ಬದಲಿಸಲು. ಅರುಣ್ ಗೋಯಲ್, ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ ಅನೇಕರು ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಸುಮ್ಮನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಅಂತ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
=================