ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಗುರುವಾರ ದುರಂತವೊಂದು ಸಂಭವಿಸಿದ್ದು, ನೇರಳೆ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 2.10ಕ್ಕೆ ಘಟನೆ ನಡೆದಿದ್ದು, ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ವ್ಯಕ್ತಿಯೊಬ್ಬ ಹಳಿ ಮೇಲೆ ಹಠಾತ್ ಜಿಗಿದಿದ್ದಾನೆ. ಆಗ ರೈಲು ಆತನಿಗೆ ಬಡಿದಿದ್ದು, ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವಿಗೀಡಾಗಿದ್ದಾನೆ. ಘಟನೆಯ ಹಿನ್ನೆಲೆ ಮೆಟ್ರೋ ರೈಲುಗಳು ಸದ್ಯ ಮಾಗಡಿ ರಸ್ತೆಯಿಂದ ವೈಟ್ಫೀಲ್ಡ್ವರೆಗೆ ಮಾತ್ರ ಸಂಚರಿಸುತ್ತಿದ್ದು, ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.