ಮಂಡ್ಯ, ಸೆ.20: ಕಾವೇರಿ ನೀರು ಸಂಕಷ್ಟ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ತಾಜ್ ಹೋಟೆಲ್ನಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಇತ್ತ ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನಟರ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಹಿನ್ನೆಲೆ ಚಿತ್ರ ನಟರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಧಿಕ್ಕಾರದ ಪೋಸ್ಟ್ಗಳನ್ನು ಹಾಕಿ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿವೆ. ಪ್ರಮುಖ ನಟರ ಫೋಟೋ ಹಾಕಿ, ನಟರ ಬಾಯಿಗೆ ಪಟ್ಟಿ ಅಂಟಿಸಿ ಅಸಮಾಧಾನ ಹೊರ ಹಾಕಲಾಗುತ್ತಿದೆ.
ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರಿಗೆ ಕನ್ನಡ ನಾಡಿನ ರೈತರಿಗೆ ಅನ್ಯಾಯ ಆದಾಗ ಮುನ್ನುಗ್ಗಿ ಬರುವ ಶಕ್ತಿ ಅವರಿಗಿತ್ತು ಎಂದು ದಿ.ನಟರನ್ನು ಸ್ಮರಿಸಲಾಗಿದೆ. ಆದರೆ ಇಂದು ಯಾವ ನಟರೂ ಕಾವೇರಿ ಬಗ್ಗೆ ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ. ನಮ್ಮಿಂದ ನಟರೇ ಹೊರತು, ನಟರಿಂದ ನಾವಲ್ಲ ಅನ್ನೋ ಸತ್ಯ ಅರಿಯಬೇಕು. ಇಂತಹ ನಿರ್ಲಕ್ಷ್ಯ ನಟರನ್ನ ನಂಬದೆ ಎಲ್ಲಾ ಕನ್ನಡಿಗರು ರೈತರ ಪರ ನಿಲ್ಲಬೇಕು. ರೈತ ಉಳಿದರೆ ನಾವೆಲ್ಲ, ರೈತನಿಲ್ಲದೆ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಪೋಸ್ಟ್ಗಳನ್ನು ಹಾಕಲಾಗಿದೆ.