ಬೆಂಗಳೂರು : ಬೆಂಗಳೂರಿನ ಕೊಡಿಗೇಹಳ್ಳಿಯ ಜ್ಯುವೆಲ್ಲರಿ ಶಾಪ್ನಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ದೇವಿನಗರದಲ್ಲಿರುವ ಲಕ್ಷ್ಮಿ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಚಿನ್ನಾಭರಣ ಮಳಿಗೆಯ ಮಾಲೀಕ ಹಣ ನೀಡುವುದಕ್ಕೆ ವಿರೋಧಿಸಿದ್ದು ದುಷ್ಕರ್ಮಿಗಳು ಹಾಗೂ ಮಾಲೀನ ನಡುವೆ ಮಾತಿನ ಚಕಮಕಿಯಾಗಿದೆ. ಆಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮಾಲೀಕ ಮತ್ತು ಇನ್ನೊಬ್ಬ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಅಪ್ಪುರಂ ಮತ್ತು ಆನಂದರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ಮೂರು ಸುತ್ತು ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಮತ್ತೊಂದೆಡೆ ದುಷ್ಕರ್ಮಿಗಳು ದರೋಡೆ ಅಲ್ಲದೆ ಸುಪಾರಿ ಪಡೆದು ಜ್ಯುವೆಲ್ಲರಿ ಅಂಗಡಿ ಮಾಲೀಕನನ್ನು ಕೊಲೆ ಮಾಡಲು ಬಂದಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.