ಮಂಡ್ಯ, ಜನವರಿ 20: ಪದೇ ಪದೇ ಅಮೇರಿಕಾಕ್ಕೆ ಹೋಗಿ ತಪ್ಪು ಮಾಡುತ್ತಿದ್ದೇನೆ ಎಂದು ಮೇಲುಕೋಟೆ (Melukote MLA) ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಪ್ಪಿಕೊಂಡರು. ಮಂಡ್ಯದಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಯಾದ ಏಳು ತಿಂಗಳಲ್ಲಿ ನಾಲ್ಕು ಬಾರಿ ಅಮೇರಿಕಾಗೆ ಹೋಗಿರುವುದು ನಿಜ. ಹೀಗೆ ಮಾಡುವುದು ತಪ್ಪೆಂದು ಗೊತ್ತಿದೆ. ನನ್ನ ಕೆಲವು ವೈಯಕ್ತಿಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ಪದೇ ಪದೇ ಅಮೇರಿಕಾಗೆ ತೆರಳಿದ್ದ ಶಾಸಕರ ಮೇಲೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಶಾಸಕರು ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು.
ಪದೇ ಪದೇ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದು ತಪ್ಪೆಂದು ಗೊತ್ತಿದೆ. ಆದರೆ, ಕೆಲವು ವೈಯಕ್ತಿಕ ಸಮಸ್ಯೆಗಳ ಕಾರಣ ಅನಿವಾರ್ಯವಾಗಿದೆ. ನನ್ನ ಹೆಂಡತಿ-ಮಕ್ಕಳು ಇದ್ದು ಅಲ್ಲಿಗೆ ತೆರಳಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳುತ್ತೇನೆ. ನಾನು ಹೋಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.