ಪ್ರತಿನಿಧಿ ವರದಿ ತಲಕಾಡು
ತಲಕಾಡು ಹೋಬಳಿ ಗಡಿಗ್ರಾಮ ಮಡವಾಡಿ ಚೆಕ್ ಪೋಸ್ಟ್ ನಲ್ಲಿ ಸೋಮವಾರ ಸಂಜೆ ವಾಹನಗಳ ತಪಾಸಣೆ ನಡೆಸುವಾಗ, ಟೆಂಪೋ ಟ್ರಾವಲ್ಸ್ ನಲ್ಲಿ ಸಾಗಿಸುತ್ತಿದ್ದ 13,18,438 ರೂ.ಗಳನ್ನು ಎಸ್ ಎಸ್ ಟಿ (ಸ್ಟಾಟಿಕ್ ಸರ್ವಲೆಂಟ್) ಟೀಂನವರು ಜಪ್ತಿ ಮಾಡಿದ್ದಾರೆ.
ಮಳವಳ್ಳಿ ತಾಲೂಕಿನಿಂದ ಮಡವಾಡಿ ಚೆಕ್ ಪೋಸ್ಟ್ ದಾಟಿ ತಿ.ನರಸೀಪುರ ಭಾಗದ ಕಡೆ ಹಣ ಸಾಗಿಸುವಾಗ ಭಾರಿ ಮೊತ್ತ ಸಿಕ್ಕಿ ಬಿದ್ದಿದೆ. ಈ ಮೊತ್ತ ಮಳವಳ್ಳಿ ತಾಲೂಕಿನ ಸ್ಟೇಷನರಿ ಪ್ರಾವಿಷನ್ ಸ್ಟೋರ್ ಗಳಿಗೆ ಐಟಿಸಿ ಕಂಪನಿ ಸಿಗರೇಟ್ ಮಾರಾಟ ಮಾಡಿ ಕೊಳ್ಳೇಗಾಲಕ್ಕೆ ಮರಳುತ್ತಿದ್ದ ಮೊತ್ತ ಎನ್ನಲಾಗಿದೆ. ಹೆಚ್ಚಿನ ವಿವರಗಳು ಅಧಿಕಾರಿಗಳ ತನಿಖೆ ನಂತರ ತಿಳಿಯಲಿದೆ.
ಚೆಕ್ ಪೋಸ್ಟ್ ನಲ್ಲಿ ಸಂಜೆ ಎರಡನೇ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಎಸ್ ಟಿ, ಟೀಂ ಅಧಿಕಾರಿಗಳಿಗೆ ಹಣ ಸಿಕ್ಕಿಬೀಳುತ್ತಿದ್ದಂತೆ ಚುನಾವಣಾ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಜಪ್ತಿಮಾಡಿದ ಮೊತ್ತಕ್ಕೆ ಸ್ವೀಕೃತಿ ನೀಡಿ, ಮುಂದಿನ ಕ್ರಮ ಜರುಗಿಸಲು ತಾಲೂಕು ತಹಸೀಲ್ದಾರ್ ಅವರ ಸುಬರ್ಧಿಗೆ ನೀಡಿದ್ದಾರೆ.
ಇದೇ ದಿನ ತಡರಾತ್ರಿ ತಿ.ನರಸೀಪುರ ಉಪ ಖಜಾನೆಗೆ ಚುನಾವಣೆ ಮಾದರಿ ನೀತಿ ಸಂಹಿತೆಯಡಿ ಜಪ್ತಿ ಮೊತ್ತವನ್ನು ಜಮಾ ಮಾಡಲಾಗಿದೆ. ಜಪ್ತಿ ಮಾಡಿದ ಮೊತ್ತದ ಪೂರ್ವಾಪರ ಹಿನ್ನೆಲೆ ಕುರಿತು ಜಿಲ್ಲಾ ಹಣ ಜಪ್ತಿ ಸಮಿತಿ ತನಿಖೆ ನಡೆಸಲಿದ್ದು, ವರದಿಯನ್ನು ಜಿಲ್ಲಾಧಿಕಾರಿಗಳು ಹಾಗು ಮುಖ್ಯ ಚುನಾವಣಾಧಿಕಾರಿಗಳಿಗೆ ಹಾಗು ಜಪ್ತಿ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಲಿದೆ.
ಚೆಕ್ ಪೋಸ್ಟ್ ಕಾರ್ಯಾಚರಣೆಯಲ್ಲಿ ಎಸ್ ಎಸ್ ಟಿ ಟೀಂ, ಶಿವಣ್ಣ (ದೊಡ್ಡಾಬಾಗಿಲು ಪಂಚಾಯಿತಿ ಪಿಡಿಒ) ತಲಕಾಡು ಆರಕ್ಷಕ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.