ಮೈಸೂರು: ಮುಡಾದ 50-50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಠಾಚಾರ ಹಗರಣ ಸಂಬಂಧಿಸಿದಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆದಿದೆ. ಪ್ರಕರಣದ A2 ಆರೋಪಿಯಾದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಲೋಕಾಯುಕ್ತ ತನಿಖೆಗೆ ಹಾಜರಾಗಿದ್ದಾರೆ.
ಮುಡಾದಲ್ಲಿ 50:50 ಹಗರಣ ಪ್ರಕರಣ ಕುರಿತಂತೆ ಲೋಕಾಯುಕ್ತ ಪೊಲೀಸರಿಂದ ಎ2 ಆರೋಪಿ ಪಾರ್ವತಿಯವರಿಗೆ ಸಾಲು- ಸಾಲು ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ನಿರಾತಂಕವಾಗಿ A2 ಆರೋಪಿ ಪಾರ್ವತಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಸತತ ಮೂರು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಹಲವು ಪ್ರಶ್ನೆಗಳನ್ನು ಪಾರ್ವತಿ ಎದುರಿಸಿದ್ದು, ನಿರಂತರ ಮೂರು ಗಂಟೆ ಎಸ್ಪಿ ಉದೇಶ್ ಕೇಳಿದ 20 ಪ್ರಶ್ನೆಗಳು ಇಂತಿವೆ..,
1. ನಿಮ್ಮ ಹೆಸರೇನು?
2. ನಿಮ್ಮ ಪತಿಯ ಹೆಸರೇನು?
3. ನಿಮ್ಮ ಮನೆಯ ವಿಳಾಸ ತಿಳಿಸಿ?
4. ನೀವು ಯಾವ ಉದ್ಯೋಗ ಮಾಡುತ್ತೀರಿ?
5. ನಿಮ್ಮ ಆದಾಯದ ಮೂಲ ಯಾವುದು?
6. ನಿಮಗೆ ಕೆಸರೆಯ ಸರ್ವೆ ನಂಬರ್ 464 ರ 3.14 ಎಕರೆ ಭೂಮಿ ಬಗ್ಗೆ ಗೊತ್ತಾ?
7. ನಿಮ್ಮ ಅಣ್ಣ ಮಲ್ಲಿಕಾರ್ಜುನಸ್ವಾಮಿ ಭೂಮಿ ಖರೀದಿ ಮಾಡಿದ್ದರ ಬಗ್ಗೆ ಗೊತ್ತಾ?
8. ನಿಮಗೆ ನಿಮ್ಮ ಅಣ್ಣ ನೀಡಿದ ಭೂಮಿ ಹಿನ್ನೆಲೆ ಗೊತ್ತಾ?
9. 2010ರಲ್ಲಿ ಭೂಮಿ ದಾನ ಮಾಡಿದಾಗ ವಿಚಾರಣೆ ನಡೆಸಿದ್ರಾ?
10. ಯಾವ ಸ್ಥಳದಲ್ಲಿ ಭೂಮಿಯನ್ನು ರಿಜಿಸ್ಟರ್ ಮಾಡಿಸಿಕೊಂಡ್ರಿ?
11. ನಿಮ್ಮ ಭೂಮಿ ಮುಡಾ ಅಕ್ವೇರ್ ಮಾಡಿಕೊಂಡಿದ್ದು ತಿಳಿದಿತ್ತಾ?
12. ನಿಮ್ಮ ಭೂಮಿಗೆ ಬದಲಾಗಿ, ಬೇರೆಡೆ ಬದಲಿ ಭೂಮಿ ಕೇಳಿದ್ರಾ? ಅಥವಾ ಹಣ ಕೇಳಿದ್ರಾ?
13. ನಿಮಗೆ ಭೂಮಿ ಬದಲಿಗೆ ಸೈಟ್ ತೆಗೆದುಕೊಳ್ಳಿ ಎಂದವರು ಯಾರು?
14. 14 ಸೈಟ್ ಪಡೆದುಕೊಳ್ಳಲು ನೀವು ಅರ್ಜಿ ಹಾಕಿದ್ರಾ?
15. ಅರ್ಜಿಯಲ್ಲಿ ಹಾಕಿರುವ ಸಹಿ ನಿಮ್ಮದೆಯಾ? ಅಥವಾ ನಿಮ್ಮ ಪರವಾಗಿ ಬೇರೆಯವರು ಸಹಿ ಹಾಕಿದ್ರಾ?
16. ದಾನಪತ್ರದ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ?
17. 14 ಸೈಟ್ ಗಳ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ?
18. ಸೈಟ್ ಗಳನ್ನು ವಾಪಸ್ ಯಾಕೆ ನೀಡಿದ್ರಿ?
19. ಈ ಎಲ್ಲಾ ವಿಚಾರಗಳು ನಿಮ್ಮ ಪತಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸೇರಿದಂತೆ ಕುಟುಂಬದವರಿಗೆ ಗೊತ್ತಾ?
20. ನೀವು ನೀಡಿರುವ ಎಲ್ಲಾ ಹೇಳಿಕೆ ಹಾಗು ದಾಖಲೆಗಳು ಸರಿ ಇವೆಯಾ?
ಸದ್ದಿಲ್ಲದ ಗೌಪ್ಯ ವಿಚಾರಣೆ?
ಭಾರೀ ಸದ್ದು ಮಾಡಿರುವ ಮುಡಾದ ಇಡೀ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 14 ನಿವೇಶನಗಳನ್ನು ವಾಪಸ್ ನೀಡಿದ ಸಂದರ್ಭ, ಖಾತೆ ಕ್ಯಾನ್ಸಲ್ ವೇಳೆಯೂ ಕೂಡ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ಉಪ ನೋಂದಣಾಧಿಕಾರಿಯೇ ಸಿಎಂ ಪತ್ನಿ ಪಾರ್ವತಿ ಇರುವಲ್ಲಿಗೆ ಹೋಗಿ ಕ್ಯಾನ್ಸಲೇಷನ್ ಕೆಲಸ ಮಾಡಿದ್ದರು ಎನ್ನಲಾಗಿದೆ. ಇದೀಗ ಲೋಕಾಯುಕ್ತ ವಿಚಾರಣೆಯಲ್ಲೂ ಅಧಿಕಾರಿಗಳು ಗೌಪ್ಯತೆ ಕಾಪಾಡಿಕೊಂಡಿದ್ದು, ಸಿಎಂ ಪತ್ನಿಯ ವಿಚಾರಣೆಯನ್ನು ಸದ್ದಿಲ್ಲದೆ ಮುಗಿಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿಚಾರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಗೌಪ್ಯ ಸ್ಥಳದಲ್ಲಿ ಪಾರ್ವತಿ ಅವರ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ ಜೆ ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ಎ2 ಆರೋಪಿ ಪಾರ್ವತಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಎ4, ಎ3 ಆರೋಪಿಗಳು, ದೂರುದಾರರು ಸೇರಿದಂತೆ ಹಲವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಆದರೀಗ ಸಿಎಂ ಪತ್ನಿಯ ವಿಚಾರಣೆಯಲ್ಲಿ ಗೌಪ್ಯತೆ ಕಾಪಾಡಿಕೊಂಡಿರುವ ಅಧಿಕಾರಿಗಳ ನಡೆ ಪ್ರಶ್ನಾರ್ಥವಾಗಿದೆ.