ಹಾಸನ, ನವೆಂಬರ್27,2024 : ಅಪ್ಪನನ್ನು ಕೊಲೆ ಮಾಡಿ ಜೈಲುಸೇರಿದ್ದ ವ್ಯಕ್ತಿಯನ್ನು ಪುತ್ರನೋರ್ವ ಬರ್ಬರವಾಗಿ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. 13 ವರ್ಷಗಳ ಹಿಂದೆ ಕೊಲೆ ಮಾಡಿ ಜೈಲು ಸೇರಿದ್ದ ವ್ಯಕ್ತಿ, ಜೈಲಿನಿಂದ ಹೊರಬಂದ ನಂತರ ಕೊಲೆ ಮಾಡಲಾಗಿದೆ.
ಅರಕಲಗೂಡು ತಾಲೂಕಿನ ಪೇಟೆ ದಡದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿರ್ವಾಣಪ್ಪ (75) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೂರ್ತಿ ಅಲಿಯಾಸ್ ಗುಂಡ ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ಆಸ್ತಿ ವಿಚಾರಕ್ಕೆ ಕಿರಿಕ್ ಆಗಿ ಕಳೆದ 13 ವರ್ಷದ ಹಿಂದೆ ಲಕ್ಕಪ್ಪ ಎಂಬುವವರನ್ನ ನಿರ್ವಾಣಪ್ಪ ಹತ್ಯೆ ಮಾಡಿದ್ದರು. ಬಳಿಕ ಜೈಲು ಶಿಕ್ಷೆಯನ್ನ ಸಹ ಅನುಭವಿಸಿದ್ದಾರೆ. ತಂದೆಯ ಸಾವಿನ ಪ್ರತೀಕಾರ ತೀರಿಸಲು ಲಕ್ಕಪ್ಪ ಪುತ್ರ 36 ವರ್ಷದ ಮೂರ್ತಿ ಅಲಿಯಾಸ್ ಗುಂಡ ಕಾದುಕುಳಿತಿದ್ದರು. ಹಲವು ವರ್ಷಗಳ ಬಳಿಕ ವೈಯಕ್ತಿಕ ಕೆಲಸಕ್ಕೆ ಗ್ರಾಮಕ್ಕೆ ಬಂದ ನಿರ್ವಾಣಪ್ಪ ಅವರನ್ನ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಹತ್ಯೆಗೈಯ್ಯಲಾಗಿದೆ.
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಗುಂಡನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದು ,ತನಿಖೆ ಆರಂಭಿಸಿದ್ದಾರೆ.
