ಮೈಸೂರು: ದೀಪಾವಳಿ ಹಿನ್ನೆಲೆ ನಗರದಲ್ಲಿ ಪಟಾಕಿ ಮಾರಾಟ ನಿಷೇಧ ಮಾಡಲಾಗಿದು, ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿರುವುದಾಗಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಸಿರು ಪಟಾಕಿಗಳ ಮೇಲೆ ಹಾಗೂ ಪಟಾಕಿ ಪ್ಯಾಕೆಟ್ ಗಳ ಮೇಲೆ ಹಸಿರು ಚಿಹ್ನೆ ಇರುತ್ತದೆ. ಉಳಿದ ಯಾವುದೇ ಪಟಾಕಿಗಳು ಹಸಿರು ಪಟಾಕಿ ಎನಿಸುವುದಿಲ್ಲ. ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿ ಮಾರಾಟಕ್ಕೆ ಮುಂದಾದರೆ ಮುಟ್ಟುಗೊಲು ಹಾಕಿಕೊಳ್ಳಲಾಗುತ್ತದೆ. ರಾತ್ರಿ 8 ರಿಂದ 10 ಗಂಟೆ ತನಕ ಪಟಾಕಿ ಸಿಡಿಸುವುದಕ್ಕೆ ಅನುಮತಿ ನೀಡಲಾಗಿದೆ. ಪಟಾಕಿ ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಅಥವಾ 145 ಡೆಸಿಬಲ್ ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧ ಮಾಡಲಾಗಿದೆ. ಇನ್ನು ಆಸ್ಪತ್ರೆ, ಶಾಲೆ, ಪ್ರಾರ್ಥನಾ ಸ್ಥಳ ಸೇರಿದಂತೆ ನಿಶ್ಯಬ್ದ ವಲಯಗಳಲ್ಲಿ ಪಟಾಕಿ ಅಥವಾ ಸಿಡಿಮದ್ದು ಸಿಡಿಸಿವುದನ್ನು ನಿಷೇಧಿಸಲಾಗಿದೆ. ಪಟಾಕಿ ಮಾರಾಟಗಾರರು, ಸಾರ್ವಜನಿಕರು ಜಿಲ್ಲಾಡಳಿತ ಹೊರಡಿಸಿರುವ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.