ಮೈಸೂರು: ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಉಪಸ್ಥಿತಿಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,92,222 ಮತದಾರರಿದ್ದು, ಪುರುಷರು 10,26,324, ಮಹಿಳೆಯರು 10,65,714, ಇತರರು 184 ಮತದಾರರಿದ್ದಾರೆ. ಒಟ್ಟು 2202 ಮತಗಟ್ಟೆಗಳು ಸ್ಥಾಪನೆಯಾಗಿದ್ದು, 9809 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಏಪ್ರಿಲ್ 26ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತಚಲಾಯಿಸಲು ಅವಕಾಶ ನೀಡಲಾಗಿದೆ ಎಂದರು. ಇನ್ನು ಮತಚಲಾಯಿಸಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲು ವ್ಯವಸ್ಥೆ ಮಾಡಲಾಗಿದೆ. 473 ಕೆ ಎಸ್ ಆರ್ ಟಿ ಸಿ ಬಸ್ಸುಗಳು, 33 ಜೀಪ್ ಗಳು, 79 ಮಿನಿ ಬಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 2,202 ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲಿರಿಸಲಾಗಿದ್ದು, 2202 ಮತಗಟ್ಟೆಗಳ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.
ಮತ ಹಾಕದೆ ಮೈಸೂರು ಅರಮನೆ ನೋಡಲು ಬಂದರೆ ನೋ ಎಂಟ್ರಿ
ಏ. 26 ರ ಮತದಾನದ ದಿನಕ್ಕೆ ಮತ ಹಾಕದೆ ಮೈಸೂರು ಅರಮನೆ ನೋಡಲು ಬಂದರೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹೇಳಿದ್ದಾರೆ. ಅಲ್ಲದೇ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಇದು ಅನ್ವಯವಾಗಲಿದ್ದು, ಮತ ಹಾಕದೆ ಅರಮನೆ ನೋಡಲು ಬಂದರೆ ಪ್ರವೇಶ ನಿರಾಕರಿಸಲು ಚಿಂತನೆ ನಡೆಸಲಾಗಿದೆ ಎಂದರು. ಇನ್ನು ಈ ಕುರಿತು ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸಲಾಗುವುದ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.