ಪ್ರತಿನಿಧಿ ವರದಿ ಮೈಸೂರು
10ನೇ ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಮತ್ತು ಯೋಗ ಗುರು ಡಾ.ಗಣೇಶ್ ಕುಮಾರ್ ಅವರ ಜನ್ಮ ಷಷ್ಠಾಬ್ದಿಯ ಅಂಗವಾಗಿ ಯೋಗ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಮೈಸೂರು ವಿಶ್ವ ವಿದ್ಯಾಲಯ ಯೋಗ ಭವನದಲ್ಲಿ ಭಾನುವಾರ ರಾಜ್ಯ ಮಟ್ಟದ ಯೋಗ ಸ್ಪರ್ಧೆ ಆಯೋಜಿಸಲಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಫರ್ದಿಗಳು ಪಾಲ್ಗೊಂಡಿದ್ದರು.ವಿವಿಧ ವಯೋಮಾನವರಿಗೆ ಸ್ಪರ್ಧೆ ನಡೆಯಿತು. ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕವಾಗಿ (ಬಾಲಕ/ ಬಾಲಕಿ) ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನ 1000 ರೂ., ಎರಡನೇ ಬಹುಮಾನ700ರೂ ಮತ್ತು ಮೂರನೇ ಬಹುಮಾನವಾಗಿ 500ರೂ.ಗಳ ಜತೆಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಬಹುಮಾನ ನೀಡಲಾಯಿತು. ಸೋಲೋ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯು ಬಾಲಕ, ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲ ಮೂರು ಸ್ಥಾನಗಳಿಗೆ ನಗದು ಬಹುಮಾನ ನೀಡಲಾಯಿತು. 4, 5 ಮತ್ತು 6ನೇ ಸ್ಥಾನದವರಿಗೆ ಪ್ರಮಾಣ ಪತ್ರ ಮತ್ತು ಆಕರ್ಷಕ ಬಹುಮಾನ ನೀಡಲಾಯಿತು.
ಯೋಗ ಫೆಡರೇಶನ್ ಆಫ್ ಮೈಸೂರಿನ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರು ಯೋಗ ಮಾಡಬೇಕು. ಹಿಂದೆ ಹರಿದ್ವಾರ ಅಥವಾ ಋಷಿಕೇಶವನ್ನು ಯೋಗದ ರಾಜಧಾನಿ ಎನ್ನಲಾಗುತ್ತಿತ್ತು. ಆದರೆ ಈಗ ಮೈಸೂರನ್ನು ಯೋಗದ ರಾಜಧಾನಿ ಎನ್ನಲಾಗುತ್ತಿದೆ. ಯೋಗ ಕ್ಷೇತ್ರದಲ್ಲಿ ಇಂದು ಮೈಸೂರು ಎತ್ತರಕ್ಕೆ ಬೆಳೆದಿದೆ. ಅಂತಾರಾಷ್ಟ್ರೀಯ ಯೋಗದಿನದಂದು ಮೈಸೂರಿನಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇದರ ಜತೆಗೆ ಮತ್ತೊಂದು ಮುಕುಟ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದಲ್ಲಿ ಪಾಲ್ಗೊಂಡು ಈ ನೆಲೆದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಮೈಸೂರಿನ ಈ ಶ್ರೀಮಂತ ಪರಂಪರೆ ಮತ್ತಷ್ಟು ಹೆಚ್ಚಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ.ಶಶಿರೇಖಾ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ದೇಹವು ದೈಹಿಕವಾಗಿ ಆರೋಗ್ಯಕರವಾಗಿದ್ದಾಗ, ಮನಸ್ಸು ಸ್ಪಷ್ಟವಾಗಿ ಕೇಂದ್ರೀಕೃತವಾಗಿರುತ್ತದೆ. ಒತ್ತಡವು ನಿಯಂತ್ರಣದಲ್ಲಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.
ಯೋಗ ಗುರು ಡಾ.ಗಣೇಶ್ ಕುಮಾರ್ ಮಾತನಾಡಿ, ಒಲಂಪಿಕ್ಸ್ ನಲ್ಲಿ ಯೋಗವನ್ನು ಒಂದು ಕ್ರೀಡೆಯನ್ನಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಂಪಿಕ್ಸ್ ಆಯೋಜಿಸಲು ಚಿಂತಿಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಡಾ.ಗಣೇಶ್ ಕುಮಾರ್ ಹಾಗೂ ಡಾ.ಎಚ್.ಎ.ಶಶಿರೇಖಾ, ಮೈಸೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರ ಕುಮಾರ್, ಯೋಗ ಫೆಡರೇಶನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಶನ್ ಖಜಾಂಚಿ ಎಂ.ಎನ್.ಮೋಹನ್, ಕರ್ನಾಟಕ ಸ್ಟೇಟ್ಸ್ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರು ಗೀತಾ ಕುಮಾರ್, ಪ್ರೇಮ್ ಕುಮಾರ್
ಸೇರಿದಂತೆ ಇತರರು ಇದ್ದರು.