ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು. ಪ್ರಾಧಿಕಾರದ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಆಯವ್ಯಯ ಮಂಡಿಸಿದ್ದು, ಪ್ರಸಕ್ತ ಸಾಲಿಗೆ 83,180.06 ಲಕ್ಷದ ಬಜೆಟ್ ಮಂಡನೆಯಾಗಿದೆ. ನಗರದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ 82577 ಲಕ್ಷ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. 603.06 ಲಕ್ಷಗಳ ಹೆಚ್ಚುವರಿ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಇದರ ಜೊತೆಗೆ ಕೆರೆ ಅಭಿವೃದ್ಧಿ, ಉದ್ಯಾನವನ ಮತ್ತು ತೆರದ ಪ್ರದೇಶಗಳ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಗುಂಪು ವಸತಿಯೋಜನೆ, ಫೆರಿಪೆರಲ್ ರಿಂಗ್ ರಸ್ತೆ ಸೇರಿ ಹಲವು ಅಂಶಗಳ ಕುರಿತು ಪ್ರಸ್ತಾಪ ಮಾಡಲಾಗಿದೆ. ಬಜೆಟ್ ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ. ಮರಿಗೌಡ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇರ್, ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಎಂಎಲ್ಸಿಗಳಾದ ಮರಿತಿಬ್ಬೇಗೌಡ, ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಡಾ.ಡಿ. ತಿಮ್ಮಯ್ಯ ಸೇರಿದಂತೆ ಮುಡಾ ಅಧಿಕಾರಿಗಳು ಭಾಗಿಯಾಗಿದ್ದರು.