ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಶರನ್ನವರಾತ್ರಿ ಅಂಗವಾಗಿ ಅರಮನೆಯಲ್ಲಿ ರಾಜವಂಶಸ್ಥರು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಿದ್ದಾರೆ. ಹೀಗಾಗಿ ಈ ಕೆಳಕಂಡ ದಿನಗಳಂದು ಅರಮನೆಯ ಒಳಾವರಣ ವೀಕ್ಷಿಸಲು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ದಸರಾ ಅಂಗವಾಗಿ ನವರಾತ್ರಿಯ ಒಂಭತ್ತು ದಿನಗಳು ರಾಜಮನೆತನದವರು ಅರಮನೆಯಲ್ಲಿ ಹಲವು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಲಿದ್ದಾರೆ. ಸೆ.27ರ ಶುಕ್ರವಾರ ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಬಳಿಕ ಅ.3ರಂದು ಅರಮನೆಯ ಖಾಸಗಿ ದರ್ಬಾರ್ನಲ್ಲಿ ರಾಜವಂಶಸ್ಥರ ಪೂಜಾ ಕೈಂಕರ್ಯಗಳು ನಡೆಯುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ 2ರವರೆಗೆ ಪ್ರವೇಶವಿರುವುದಿಲ್ಲ.
ಇದಾದ ನಂತರದಲ್ಲಿ ಅ.11ರಂದು ಅರಮನೆಯಲ್ಲಿ ನಡೆಯುವ ಆಯುಧ ಪೂಜೆ ಹಾಗೂ ಅ.12ರಂದು ವಿಜಯ ದಶಮಿಯ ಪ್ರಯುಕ್ತ ಇಡೀ ದಿನ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅ.27ರ ಭಾನುವಾರ ಅರಮನೆಯಲ್ಲಿ ಸಿಂಹಾಸನ ವಿಸರ್ಜನೆ ಮಾಡುವ ಕೆಲಸ ನಡೆಯುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಪ್ರವೇಶವಿರುವುದಿಲ್ಲ