ಮೈಸೂರು: ಮತದಾನಕ್ಕೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಕನಕಪುರದ ಬಳಿ ರೆಸಾರ್ಟ್ ನಲ್ಲಿ ಇದ್ದಾರೆಂದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷ ವಾಮಮಾರ್ಗದ ಮೂಲಕ ನಂಜನಗೂಡು ನಗರಸಭೆಯ ಅಧಿಕಾರ ಹಿಡಿದಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ಆರೋಪಿಸಿದ್ದಾರೆ.
ನಂಜನಗೂಡು ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಕೈ ತಪ್ಪಿದ ಎಫೆಕ್ಟ್ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನಕ್ಕೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಕನಕಪುರದ ಬಳಿ ರೆಸಾರ್ಟ್ ನಲ್ಲಿ ಇದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಆ ನಾಲ್ವರು ಸದಸ್ಯರು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ರೀತಿಯ ಸಂಪರ್ಕಕ್ಕೆ ಸಿಗಲಿಲ್ಲ.
ಜೆಡಿಎಸ್ ನ ರೆಹಾನಬಾನು ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಒಪ್ಪಿದ್ದೆವು, ಆದರೂ ಜೆಡಿಎಸ್ ನ ಮೂವರು ಸದಸ್ಯರು ಕಡೇ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಇವರೆಲ್ಲರೂ ಯಾವ ಆಮಿಷಕ್ಕೆ ಬಲಿಯಾಗಿದ್ದಾರೋ ಗೊತ್ತಿಲ್ಲ ಬಹುಶಃ ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ. ಜೆಡಿಎಸ್ ಸದಸ್ಯರ ನಿಲುವು ಆಘಾತ ಉಂಟು ಮಾಡಿದೆ.
ಅಧಿಕಾರ ಹಿಡಿಯಬೇಕೆಂಬ ಹಠದಲ್ಲಿ ಕಾಂಗ್ರೆಸ್ ಪಕ್ಷ ವಾಮ ಮಾರ್ಗ ಅನುಸರಿಸಿರುವುದು ಖಂಡನೀಯ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಅಕ್ರಮವಾಗಿ ಸಂಗ್ರಹಿಸಿರುವ ಹಣದ ಬಳಕೆ ಮಾಡಿ ಅಧಿಕಾರ ಹಿಡಿದಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು ಹಾಗೂ ಶಾಸಕರ ಕೈವಾಡವಿದೆ. ಅಲ್ಲದೆ ನಮ್ಮ ಪಕ್ಷದಲ್ಲೇ ನಮ್ಮನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ ಮಾತನಾಡಿ, ನಂಜನಗೂಡು ನಗರಸಭೆ ಚುನಾವಣೆಗೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಗರಸಭೆ ಚುನಾವಣೆ ಸಂಬಂಧ ಬಿಜೆಪಿಯ ಎಲ್ಲಾ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೂ ಪಕ್ಷದ ವಿಪ್ ಉಲ್ಲಂಘಿಸಿ ನಾಲ್ವರು ಬಿಜೆಪಿ ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದಾರೆ. ಹಾಗಾಗಿ ವಿಪ್ ಉಲ್ಲಂಘಿಸಿರುವ ಬಿಜೆಪಿ ನಗರಸಭೆ ಸದಸ್ಯರಾದ ಗಿರೀಶ್ ಕುಮಾರ್, ಗಾಯತ್ರಿ, ವಿಜಯಲಕ್ಷ್ಮಿ, ಮೀನಾಕ್ಷಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಬಿಜೆಪಿ ಸದಸ್ಯರು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ.
ಅಲ್ಲದೇ ನಾಲ್ವರ ವಿರುದ್ದವೂ ಕಾನೂನು ಹೋರಾಟ ನಡೆಸುತ್ತೇವೆ ಈ ಮೂಲಕ ಪಕ್ಷ ವಿರೋಧಿ ಕೃತ್ಯಗಳಲ್ಲಿ ತೊಡಗುವವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಹೇಳಿದರು.
ಮೈಸೂರು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹರ್ಷವರ್ಧನ್, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್ ಆರ್ ಮಹದೇಸ್ವಾಮಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತಿತರಿದ್ದರು.