ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರವೇಶ ದರ ಇಂದಿನಿಂದ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಅರಮನೆ ಮಂಡಳಿಯು ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದ್ದು, ವಿದೇಶಿ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕುವ ನಿರ್ಧಾರ ಕೈಗೊಂಡು ಜಿಎಸ್ಟಿ ಸೇರಿ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದೆ.
ವಿದೇಶಿ ಪ್ರವಾಸಿಗರಿಗೆ 1000 ರೂಪಾಯಿ ನಿಗದಿ ಮಾಡಿ ಭಾರೀ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಿ ಅರಮನೆ ಮಂಡಳಿ ಪಟ್ಟಿ ಬಿಡುಗಡೆ ಮಾಡಿದೆ. ವಿದೇಶಿ ಪ್ರವಾಸಿಗರಿಗೆ ಹಿಂದಿನ ಶುಲ್ಕ 100 ರೂಪಾಯಿ ಇತ್ತು ಆದರೀಗ ಏಕಾಏಕಿ 900 ರೂಪಾಯಿ ಹೆಚ್ಚಳ ಮಾಡಿ ವಿದೇಶಿಗರ ಜೇಬಿಗೆ ಕತ್ತರಿ ಹಾಕಲು ನಿರ್ಧಾರ ಕೈಗೊಂಡಿದೆ. ಭಾರತೀಯ ವಯಸ್ಕರಿಗೆ ಹಿಂದಿನ ಶುಲ್ಕ 100ರೂಗಳಿತ್ತು, ಆದರೀಗ 20 ರೂಪಾಯಿ ಹೆಚ್ಚಳ ಮಾಡಿ 120 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. 10 ರಿಂದ 18 ವರ್ಷದ ವಯೋಮಾನದವರಿಗೆ 70 ರೂಪಾಯಿ ನಿಗದಿ ಮಾಡಲಾಗಿದ್ದು, ಶೈಕ್ಷಣಿಕ ಪ್ರವಾಸಕ್ಕೆಂದು ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂಪಾಯಿ ನಿಗದಿ ಮಾಡಿ ಮೈಸೂರು ಅರಮನೆ ಮಂಡಳಿಯಿಂದ ಆದೇಶ ಹೊರಡಿಸಲಾಗಿದೆ. ಇನ್ನು ಅರಮನೆ ಒಳಾವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗೇಜ್ ಕೊಠಡಿ, ಶೌಚಾಲಯ ಸೇವಾ ಶುಲ್ಕ ರದ್ದು ಮಾಡಲಾಗಿ ಪ್ರವಾಸಿಗರಿಗೆ ಉಚಿತ ಸೇವೆ ನೀಡಲು ಅರಮನೆ ಮಂಡಳಿ ಮುಂದಾಗಿದೆ.