ಮೈಸೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಪ್ರಜ್ವಲ್ ತಂದೆ, ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣರನ್ನು ಕೂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಹೆಚ್ಡಿ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ಹೆಚ್ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ.
‘ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ವಿಡಿಯೋಗಳು ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಮೈಸೂರು ಪೊಲೀಸ್ ಹೆಚ್ಚುವರಿ ಆಯುಕ್ತೆ ಕೆಆರ್ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಹೆಚ್ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣರನ್ನು ಆರೋಪಿ ಸಂಖ್ಯೆ 1 ಎಂದೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದೂ ನಮೂದಿಸಲಾಗಿದೆ.