- ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 2 ಸಾವಿರ ಮತಗಟ್ಟೆ ಕೇಂದ್ರಗಳಲ್ಲಿ ನಡೆಯಲಿರುವ ಮತದಾನ
- ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಸುವ ಮತಟ್ಟೆಗಳ ನಿರ್ಮಾಣ । ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ
ಪ್ರತಿನಿಧಿ ವರದಿ ಚಾಮರಾಜನಗರ
ಏ.26ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದ ಕಾರ್ಯಕ್ಕಾಗಿ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಮತಯಂತ್ರಗಳೊಂದಿಗೆ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ಜಿಲ್ಲೆಯ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆಯ ಸೆಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಹನೂರಿನ ಕ್ರೈಸ್ತರಾಜ ಎಜುಕೇಷನ್ ಟ್ರಸ್ಟ್, ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತೆರೆಯಲಾಗಿದ್ದ ಮಸ್ಟರಿಂಗ್ ಕೇಂದ್ರಗಳಿಗೆ ಗುರುವಾರ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ, ಇವಿಎಂ, ವಿವಿ ಪ್ಯಾಟ್ ಸೇರಿದಂತೆ ಚುನಾವಣೆ ಕಾರ್ಯಗಳ ಇತರೆ ಸಲಕರಣೆಗಳನ್ನು ಪಡೆದುಕೊಂಡರು. ಅವರೆಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿಯೆ ಊಟೋಪಚಾರ ಮುಗಿಸಿ ಬಳಿಕ ಅಧಿಕಾರಿಗಳ ಸೂಚನೆ ಪಡೆದು, ಕೆ.ಎಸ್.ಅರ್.ಟಿ.ಸಿ ಬಸ್ ಗಳ ಮೂಲಕ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ಮತಗಟ್ಟೆಗಳ ವಿವರ: ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 983 ಹಾಗೂ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1017 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಚಾಮರಾಜನಗರ ಜಿಲ್ಲೆಯ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,76,444 ಮತದಾರರಿದ್ದು, ಹನೂರು ವಿಧಾನಸಭಾ ಕ್ಷೇತ್ರದಲ್ಲಿ 254, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 241, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 239 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 249 ಸೇರಿದಂತೆ ಒಟ್ಟು 983 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ.
ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9,01,866 ಮತದಾರರಿದ್ದು, ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 282, ನಂಜನಗೂಡು 246, ವರುಣ 261 ಹಾಗೂ ಟಿ.ನರಸೀಪುರ 228 ಸೇರಿದಂತೆ ಒಟ್ಟು1,017 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟಾರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 17,78,310 ಮತದಾರರಿದ್ದು, 2 ಸಾವಿರ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ.
ಚಾಮರಾಜನಗರ ಜಿಲ್ಲೆಯ 983 ಮತಗಟ್ಟೆಗೆ 252 ಕಾಯ್ದಿರಿಸಿರುವುದು ಸೇರಿ ಒಟ್ಟು 1235 ಬ್ಯಾಲೆಟ್ ಯೂನಿಟ್, 983 ಮತಗಟ್ಟೆಗೆ 253 ಕಾಯ್ದಿರಿಸಿರುವುದು ಸೇರಿ ಒಟ್ಟು 1236 ಕಂಟ್ರೋಲ್ ಯೂನಿಟ್, 983 ಮತಗಟ್ಟೆಗೆ 313 ಕಾಯ್ದಿರಿಸಿರುವುದು ಸೇರಿ ಒಟ್ಟು 1296 ವಿವಿಪ್ಯಾಟ್ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಒಟ್ಟು 983 ಮತಗಟ್ಟೆಗಳಿಗೆ 1,196 ಪಿ.ಆರ್.ಒ, 1,196 ಎ.ಪಿ.ಆರ್.ಒ, 2,392 ಪಿ.ಒ ಸೇರಿದಂತೆ ಒಟ್ಟು 4,784 ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 983 ಮತಗಟ್ಟೆಗಳ ಪೈಕಿ 197 ಮತಗಟ್ಟೆಗಳನ್ನು ಸೂಕ್ಷ್ಮ(ಕ್ರಿಟಿಕಲ್)ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಚುನಾವಣೆಯನ್ನು ಶಾಂತಿಯುತ, ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ 4 ಡಿವೈಎ್ಸಪಿ, 13 ಪೊಲೀಸ್ ಇನ್ಸ್ಪೆಕ್ಟರ್, 41 ಸಬ್ ಇನ್ಸ್ಪೆಕ್ಟರ್, 67 ಎಎಸ್ಐ, 936 ಹೆಡ್ ಕಾನ್ಸ್ಟೇಬಲ್, 600 ಹೋಂಗಾರ್ಡ್, 6 ಎಫ್ಜಿ ಸೇರಿದಂತೆ ಒಟ್ಟು1,667 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಶೇಷ ಮತಗಟ್ಟೆ ಕೇಂದ್ರಗಳು: ಮಹಿಳಾ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು ಹಾಗೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಮತಗಟ್ಟೆಗಳಂತೆ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ತೆರೆಯಲಾಗಿದೆ. ಬುಡಕಟ್ಟು ಜನರನ್ನು ಮತದಾನಕ್ಕೆ ಪ್ರೇರೇಪಿಸಲು ಆದ್ಯತೆ ನೀಡಲಾಗಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷ ಚೇತನರಿಗೆ ಅನುಕೂಲವಾಗುವಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ರಂತೆ 4 ವಿಶೇಷಚೇತನರ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಮತದಾನದೆಡೆ ಸೆಳೆಯಲು ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 8 ಯುವ ಸೌರಭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಸುವ ಮತಗಟ್ಟೆಗಳು: ಜಿಲ್ಲೆಯ ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಸಲು ಅನುಕೂಲವಾಗುವಂತೆ ಹನೂರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದೆ. ರೈತರ ಮಹತ್ವವನ್ನು ಬಿಂಬಿಸುವ ಅನ್ನದಾತ ಮತಗಟ್ಟೆಗಳನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2ರಂತೆ ಒಟ್ಟು 8 ಅನ್ನದಾತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಣ್ಯ ಮಹತ್ವ ತಿಳಿಸಲು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1, ಕೊಳ್ಳೇಗಾಲ 1, ಚಾಮರಾಜನಗರ 2 ಹಾಗೂ ಗುಂಡ್ಲುಪೇಟೆ 2 ಸೇರಿದಂತೆ ಒಟ್ಟು 6 ಹಸಿರು ಮತಗಟ್ಟೆಗಳನ್ನು ತೆರೆಯಲಾಗಿದೆ.
ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮನಿ ಸಾಹು, ಎಇಡಿಸಿ ಗೀತಾ ಹುಡೇದ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದರು.
25ಸಿಎಚ್ಎನ್.1: ಚಾಮರಾಜನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾಗಿದ್ದ ಮಸ್ಟರಿಂಗ್ ಕೇಂದ್ರದಿಂದ ಮತಯಂತ್ರಗಳೊಂದಿಗೆ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ಸಿಬ್ಬಂದಿ.