ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿ.25 ರಂದು ಒಂದೇ ದಿನ 125 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇನ್ನು 34 ಜನರಿಗೆ ಜೆಎನ್ 1 ರೂಪಾಂತರಿ ಕೊರೋನಾ ವೈರಸ್ ತಗುಲಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 125 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 94 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,089,587 ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 436ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಮವಾರ 3,155 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ 436 ಸಕ್ರಿಯ ಕೊರೋನಾ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 3.96 ರಷ್ಟು ಇದೆ. ಬೆಂಗಳೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರು ಸೇರಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ 5, ಹಾಸನ 5, ಮೈಸೂರು 13, ಶಿವಮೊಗ್ಗ 2, ವಿಜಯಪುರ 2, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.
ಕೊರೋನಾ ರೂಪಾಂತರಿ ಜೆಎನ್ 1 ವೈರಸ್ನ 35 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಮೊದಲು ಕೇರಳದಲ್ಲಿ ಉಪತಳಿ ಪತ್ತೆಯಾಗಿತ್ತು. ಇದೀಗ ದೇಶದ ಕೆಲವು ರಾಜ್ಯಗಳಲ್ಲಿ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಏರಿಕೆ ಕಂಡಿದೆ. 36 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 36 ರಲ್ಲಿ 7 ಜನರು ಐಸಿಯುವಿನಲ್ಲಿದ್ದಾರೆ. 400 ಜನ ಹೋಮ್ ಐಸೊಲೇಷನ್ನಲ್ಲಿದ್ದಾರೆ.
ರಾಜ್ಯದಲ್ಲಿ 192 ಸೋಂಕಿತರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 60 ಮಾದರಿಗಳ ಫಲಿತಾಂಶ ಲಭ್ಯವಾಗಿದ್ದು, 34 ಮಂದಿಯಲ್ಲಿ ಹೊಸ ವೈರಾಣು ಜೆಎನ್ 1 ಪತ್ತೆಯಾಗಿದೆ. ಈ ಪೈಕಿ ಈಗಾಗಲೇ ಮೂರು ಮಂದಿ ಸಾವಿಗೀಡಾಗಿದ್ದು, ಉಳಿದ 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ