ಪರಭಾಷ ಸಿನಿಮಾ ಹಾವಳಿಗೆ ಸ್ಯಾಂಡಲ್ವುಡ್ ತತ್ತರಿಸಿಹೋಗಿದೆ. ನಿರ್ಮಾಪಕರು ಹಾಗೂ ನಟ ನಟಿಯರು ಸಂಕಷ್ಟದಲ್ಲಿದ್ದಾರೆ. ಇದರ ಬೆನ್ನಲ್ಲೇ ತಮಿಳಿನ ದಳಪತಿ ವಿಜಯ್ ನಟನೆಯ “ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಇಂದು ದೇಶಾದ್ಯಂತ ತೆರೆಕಾಣುತ್ತಿದೆ. ಇದು ತಮಿಳಿನ ಸಿನಿಮಾವಾದರೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರದರ್ಶನಗಳು ಮೀಸಲಾಗಿವೆ. ಈ ಮೂಲಕ ರಾಜಧಾನಿಯಲ್ಲಿರುವ ಮಲ್ಟಿಪ್ಲೆಕ್ಸ್ಗಳು ಮತ್ತೆ ಅನ್ಯಭಾಷೆಯ ಚಿತ್ರಗಳಿಗೆ ಮಣೆ ಹಾಕುವ ಧೋರಣೆಯನ್ನು ಎತ್ತಿ ಹಿಡಿದಿವೆ. ಚೆನ್ನೈ, ಹೈದರಾಬಾದ್ ಗೆ ಹೋಲಿಸಿದರೆ, ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರದರ್ಶನಗಳು ಮೀಸಲಾಗಿರುವುದಲ್ಲದೇ, ಟಿಕೆಟ್ ದರವೂ ದುಪ್ಪಟ್ಟಾಗಿದೆ.
ಈ ಮೂಲಕ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಇದೊಂದು ಹಿನ್ನಡೆಯಾದಂತಾಗಿದೆ.ಮೂಲ ತಮಿಳಿನ ಗೋಟ್ ಚಿತ್ರ ತೆಲಗು, ಹಿಂದಿ ಭಾಷೆಗಳಿಗೆ ಡಬ್ ಆಗಿ ತೆರೆ ಕಾಣುತ್ತಿದೆ. ಚಿತ್ರದ ಬಿಡುಗಡೆ ಮುನ್ನವೇ ಮುಂಗಡ ಬುಕ್ಕಿಂಗ್ ಸಹ ತೆರೆಯಲಾಗಿತ್ತು. ಬುಕ್ ಮೈ ಶೋನ ಅಂಕಿ ಅಂಶಗಳ ಪ್ರಕಾರ ಚಿತ್ರದ ಬಿಡುಗಡೆಯ ಮೊದಲ ದಿನ ಬೆಂಗಳೂರಿನಲ್ಲಿ 1108 ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಜತೆಗೆ ತೆಲುಗು ಅವತರಣಿಕೆಯ 74 ಶೋಗಳನ್ನು ಮಲ್ಟಿಪ್ಲೆಕ್ಸ್ಗಳು ಮೀಸಲಿಟ್ಟಿವೆ. ತಮಿಳಿನ ಗೋಟ್ ಸಿನಿಮಾ ಚೆನ್ನೈನಲ್ಲಿ 800 ಪ್ರದರ್ಶನಗಳನ್ನು ಮಾತ್ರ ಕಾಣುತ್ತಿದ್ದು, ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ 300 ಶೋಗಳು ಹೆಚ್ಚಾಗಿವೆ. ಕನ್ನಡ ಚಿತ್ರರಂಗದ ಅನೇಕ ಹಿರಿಯರು ಈ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.