ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಪ್ರತಿನಿಧಿ ವರದಿ ಮಡಿಕೇರಿ
ರಾಜ್ಯದಲ್ಲಿ 746 ಕೋಟಿ ರೂ. ಮತ್ತು ಕೊಡಗು ಜಿಲ್ಲಾ ಪಿಡಿ ಖಾತೆಯಲ್ಲಿ 46 ಕೋಟಿ ರೂ. ಹಣ ಇದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭೂ ಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಡಿಕೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ನಿಲ್ಲದ ಕಾರಣ ಭೂ ಕುಸಿತದ ಪ್ರದೇಶವನ್ನು ಸರಿ ಪಡಿಸಲು ತೊಡಕ್ಕಾಗಿದೆ. 20 ಕಡೆ ಭೂ ಕುಸಿತ ನಡೆದಿದೆ. ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿರುವುದು ಹೆಚ್ಚು ಕಡೆ ಆಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 67 ಮನೆಗಳು ಪೂರ್ಣಹಾನಿ ಆಗಿದ್ದು, 176 ಮನೆಗಳು ಭಾಗಶಃ ಹಾನಿಯಾಗಿದೆ. 1.20 ಲಕ್ಷ ರೂ. ಅನುದಾನದಲ್ಲಿ ಮನೆ ನಿರ್ಮಿಸಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಇದರಲ್ಲಿ 43 ಸಾವಿರ ರೂ.ಅನ್ನು ರಾಜ್ಯ ಸರ್ಕಾರದ ಹಣ ನೀಡಲಾಗುತ್ತದೆ. ಈಗಾಗಲೇ ಸಂತ್ರಸ್ಥರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಿದೆ ಎಂದರು.
16 ಜಾನುವಾರು ಸತ್ತಿದ್ದು, ತಲಾ 35 ಸಾವಿರ ರೂ. ಪರಿಹಾರ ನೀಡಲಾಗಿದೆ. 14 ಪರಿಹಾರ ಕ್ಯಾಂಪ್ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ಗಳಲ್ಲಿ 186 ಜನರು ಆಶ್ರಯ ಪಡೆದಿದ್ದಾರೆ. ಬೆಳೆ ನಾಶದ ವಿಚಾರದಲ್ಲಿ ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. 28 ಹೆಕ್ಟೇರ್ ಪ್ರದೇಶ ತೋಟಗಾರಿಕಾ ಬೆಳೆ ಹಾನಿಯಾಗಿದೆ. 2708 ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. 150 ಬಿಟ್ಟು ಉಳಿದೆಲ್ಲಾವನ್ನೂ ಮತ್ತೆ ಅಳವಡಿಸಲಾಗಿದೆ. ಹಾಳಾಗಿದ್ದ 47 ಟ್ರಾನ್ಸ್ ಫಾರ್ಮರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ ಎಂದು ತಿಳಿಸಿದರು.
344 ಕಿ.ಮಿ. ಉದ್ದದ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ರಸ್ತೆಗಳು ಹಾನಿಯಾಗಿದ್ದು, ಆದ್ಯತೆ ಮೇಲೆ ಸರಿ ಪಡಿಸಲು ಸೂಚಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದೆ. ನಾವು ಮುಂಜಾಗ್ರತಾ ಕ್ರಮಗಳ ಜತೆಗೆ ಅನಾಹುತ ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಭೂ ಕುಸಿತದ ದುರಸ್ತಿ ಕಾರ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಮಾಜಿ ಸಚಿವ ನಾಣಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಫೋಟೋ 2 ಎಂಡಿಕೆ 03 ; ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ