ಮಂಡ್ಯ: ತಾಲೂಕಿನ ಗಾಮನಹಳ್ಳಿ, ಶಿವನಹಳ್ಳಿ ಮತ್ತು ಮದ್ದೂರು ತಾಲ್ಲೂಕಿನ ಗೊರನಹಳ್ಳಿ ಗ್ರಾಮಗಳಲ್ಲಿ 7ಎ ಇಲ್ಲದೆ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುತ್ತಿದ್ದ ರಿಗ್ ವಾಹನಗಳಿಗೆ ನಿಯಮಾನುಸಾರ ದಂಡ ವಿಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಂತರ್ಜಲ ಇಲಾಖೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾ. 30 ರಂದು ನಡೆದ ಸಭೆಯಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಪ್ರಕಾರ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ 7ಎ ಹೊಂದದೆ ಜಿಲ್ಲೆಯಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುತ್ತಿರುವ ರಿಗ್ ವಾಹನಗಳಿಗೆ ದಂಡ ವಿಧಿಸಲು ಮತ್ತು ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ ಮೇರೆಗೆ ಕ್ರಮ ವಹಿಸಲಾಗಿದೆ.
ಹಾಗಾಗಿ ಇನ್ನು ಮುಂದೆ ಸಾರ್ವಜನಿಕರು ಕರ್ನಾಟಕ ಅಂತರ್ಜಲ ಪ್ರಾಧಿಕಾರದಡಿ ನೋಂದಣಿಯಾಗಿ 7ಎ ಹೊಂದಿರುವ ರಿಗ್ ಯಂತ್ರಗಳ ಮೂಲಕ ಕೊಳವೆ ಬಾವಿಯನ್ನು ಕೊರೆಸತಕ್ಕದ್ದು. ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರಗಳ ನೋಂದಣಿಯಾಗಿರುವ (7ಎ) ವಿವರವನ್ನು ಇಲಾಖಾ ವೆಬ್ಸೈಟ್ antharjala.karnataka.gov.in ನಲ್ಲಿ ತಿಳಿಯಬಹುದಾಗಿದೆ.
ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುತ್ತಿದ್ದಲ್ಲಿ ಜಿಲ್ಲಾ ಅಂತರ್ಜಲ ಕಛೇರಿ, ಅಂತರ್ಜಲ ನಿದೇಶನಾಲಯ ದೂ: 08232-200704, ಇಮೇಲ್: Sedgwmdy@gmail.com ಇವರಿಗೆ ಮಾಹಿತಿ ನೀಡಬಹುದು ಎಂದು ಮಂಡ್ಯ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.