ಬೆಂಗಳೂರು : ರಾಜ್ಯದ 1054 ಸಣ್ಣ ಗುತ್ತಿಗೆದಾರರ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್ ಇರುವ 600 ಕೋಟಿ ರೂ. ಹಣವನ್ನು ಲೋಕೋಪಯೋಗಿ ಇಲಾಖೆ ಯಾವುದೆ ಲಂಚ ಪಡೆಯದೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು. ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ರೀತಿ ಉಳಿದ ಇಲಾಖೆಯಲ್ಲಿಯೂ ಬಿಡುಗಡೆ ಆಗಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸಹಕಾರ ನೀಡುತ್ತಿದ್ದಾರೆ. ಬಿ.ಬಿ.ಎಂ.ಪಿಯಲ್ಲಿನ ಬಾಕಿ ಬಿಲ್ಗಳ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇನ್ನೂ ಒಂದು ವರ್ಷದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೈಕೋರ್ಟ್ ಸಹ ಇವತ್ತು ಬಿಲ್ ಬಿಡುಗಡೆ ಬಗ್ಗೆ ಹೇಳಿದೆ. ಪ್ಯಾಕೇಜ್ ಸಿಸ್ಟಂ ಆರೋಪಕ್ಕೆ ಗುತ್ತಿಗೆದಾರರ ಸಂಘ ಬದ್ಧವಿದೆ. ಪ್ಯಾಕೇಜ್ ಸಿಸ್ಟಂನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಪ್ಯಾಕೇಜ್ ಸಿಸ್ಟಂ ರದ್ದು ಮಾಡುವ ಒತ್ತಾಯಕ್ಕೆ ನಮ್ಮ ಸಂಘ ಬದ್ಧವಾಗಿದೆ ಎಂದರು.