ಮಂಡ್ಯ : ಈ ವರ್ಷ 25 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು ಮಾರ್ಚ್ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಮೊತ್ತದ ಬೆಳೆ ವಿಮೆ ವಿತರಿಸಲಾಗುವುದು. ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ. ಅನ್ನು ಮಾರ್ಚ್ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು. ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ 7,500 ಕೃಷಿ ಹೊಂಡ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆ 20,000 ತಲುಪಲಿದೆ ಐದು ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎಂಬ ತಾರತಮ್ಯವಿಲ್ಲದೆ ಜನಸಾಮಾನ್ಯರಿಗೆ ಸಮಾನವಾಗಿ ನೀಡಲಾಗುತ್ತಿದೆ. ಜನರನ್ನು ಸಶಕ್ತಗೊಳಿಸಲು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ತನ್ನ ಭರವಸೆಯನ್ನು ಈಡೇರಿಸಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಯೋಜನೆಗಳಿಗೆ 35,000 ಕೋಟಿ ವೆಚ್ಚ ಮಾಡಿದೆ ಎಂದು ಹೇಳಿದರು.