ಶಿವಮೊಗ್ಗ : ಬಿಜೆಪಿ ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಂಡಾಯವೆದ್ದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿದ್ದಾರೆ. ಈ ಬಂಡಾಯ ಶಮನಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಮತ್ತು ಕೆಎಸ್ ಈಶ್ವರಪ್ಪ ಅವರ ನಡುವೆ ನಡೆದ ಸಭೆ ವಿಫಲವಾಗಿದೆ. ನಾಳೆ ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್ ಈಶ್ವರಪ್ಪ ಗೈರಾಗುವ ಸಾಧ್ಯತೆ ಇದೆ. ಹೀಗಾಗಿ ಬಂಡಾಯ ಶಮನ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹೇಳಲು ಇಂದು ಬೆಳಿಗ್ಗೆ ಕೆಎಸ್ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಭೇಟಿ ನೀಡಿ ಚರ್ಚಿಸಲು ಮುಂದಾಗಿದ್ದರು. ಆದರೆ ಕೆಎಸ್ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದರು. ವರಿಷ್ಠರನ್ನ ಮನೆಯಲ್ಲಿ ಕೂರಿಸಿ ಹೊರಗೆ ಹೋಗಿದ್ದ ಕೆಎಸ್ ಈಶ್ವರಪ್ಪ ಅರ್ಧ ಗಂಟೆ ಕಳೆದರೂ, ಮನೆಯೊಳಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್.ಈಶ್ವರಪ್ಪ ಮನೆಯಿಂದ ತೆರಳಿದರು. ಈ ಮೂಲಕ ಸಂಧಾನ ಸಭೆ ವಿಫಲವಾಗಿದೆ.