ಚಾಮರಾಜನಗರ : ಹನೂರು ತಾಲ್ಲೂಕಿನ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 25 ದಿನಗಳ ಅವಧಿಯಲ್ಲಿ ದಾಖಲೆಯ 3 ಕೋಟಿ 13 ಲಕ್ಷ ರೂ. ಹಣ ಸಂಗ್ರಹವಾಗಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಹರಕೆ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿಯನ್ನು ಹುಂಡಿಗೆ ಹಾಕಿದ್ದಾರೆ. ಹುಂಡಿಗಳ ಎಣಿಕೆಯಲ್ಲಿ ಈ ಸಲ 3,13,00,931 ರೂ. ಸಂಗ್ರಹವಾಗಿದೆ. 47 ಗ್ರಾಂ ಚಿನ್ನ ಮತ್ತು 2.3 ಕೆ.ಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದರ ಜೊತೆಗೆ ಯುಎಸ್ಎ, ಬಾಂಗ್ಲಾದೇಶ, ನೇಪಾಳ, ಮಲೇಶಿಯಾದ 7 ವಿದೇಶಿ ನೋಟುಗಳು, ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 26 ನೋಟುಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ.