ಮೈಸೂರು: ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಏಕೈಕ ವ್ಯಕ್ತಿ ಪ್ರತಾಪ್ ಸಿಂಹ, ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಮ್ಮ ನಾಯಕರಿಗೆ ತೊಡೆ ನಡುಗುತ್ತೆ ಎಂದು ಸ್ವಪಕ್ಷದ ವಿರುದ್ಧ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಿಯಲ್ ಎಸ್ಟೇಟ್ ಮಾಡ್ಲಿಲ್ಲ, ಕಮಿಷನ್ ಪಡೆದಿಲ್ಲ. ಭಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಅಭಿವೃದ್ಧಿ ಮಾತ್ರ ಮಾಡಿದ್ದೇನೆ. ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲ ಈ ಹಿಂದೆ ಬಿಜೆಪಿಯಿಂದ ಗೆದ್ದವರು ಪಕ್ಷವನ್ಮ ಹೇಗೆ ಕಟ್ಟಿದ್ರು, ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಿ. ನಿಮ್ಮ ಜತೆ ನಾನು ಸದಾ ಇರುತ್ತೇನೆ. ಮುಂದಿನ ದಿನಗಳಲ್ಲಿ ಗಾಸಿಪ್ ಗಳನ್ನು ಹರಡಿಸಬೇಡಿ. ಜನರ ಪ್ರೀತಿಯನ್ನು ಸಂಪಾದನೆ ಮಾಡಿದ್ದೇನೆ. ರಾಜು ಕೊಲೆಯಾದಾಗ ಧೈರ್ಯದಿಂದ ಹೋರಾಟ ಮಾಡಿದ್ದೇನೆ. ಕೊಡಗು- ಮೈಸೂರು ಬಿಜೆಪಿ ಭದ್ರ ಕೋಟೆ. ಇವತ್ತು ನನಗೆ ಟಿಕೆಟ್ ಕೊಟ್ರೆ ಮೂರು ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಆಲ್ ಪಾರ್ಟಿ ಮೆಂಬರ್ ನಾನು. ಒಳ್ಳೆಯ ಕೆಲಸ ಮಾಡಿದ್ದೇನೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ಅವಕಾಶ ಸಿಕ್ಕರೆ ಕೊಡಗಿನ ಜನರ ಋಣ ತೀರಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ನಿಮ್ಮ ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯುವ ಸ್ಥಿತಿ ಬರಬಾರದು ಎಂದು ಯದುವೀರ್ ಒಡೆಯರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು. ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಯಾರು ತಲೆ ಕಡೆಸಿಕೊಳ್ಳಬೇಡಿ. ಗಟ್ಟಿ ಪಿಂಡ ನಾನು.ಯಾವ ಹಿನ್ನಲೆ ಇಲ್ಲದೆ ಇಲ್ಲಿ ತನಕ ಬಂದಿದ್ದೇನೆ. ನಾನು ಪಕ್ಷಕ್ಕೋಸ್ಕರ ಬಾವುಟ ಕಟ್ಟುತ್ತೇನೆ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಲೀಡರ್ ಗಳ ಹಿಂದೆ ಹೋಗಬೇಡಿ. ಪಕ್ಷದ ಜತೆ ಹೋಗಿ.ಅಪಪ್ರಚಾರ ಮಾಡಬೇಡಿ.ನಾನೇ ಆಗಲಿ ಮತ್ತೊಬ್ಬರೇ ಆಗಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮನವಿ ಮಾಡಿದರು.