ಬೆಂಗಳೂರು: ಕಾಂಗ್ರೆಸ್ನಿಂದ ನನಗೆ ಆಫರ್ ಬಂದಿರುವುದು ನಿಜ. ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಆದರೆ ನಾನು, ಕಾಂಗ್ರೆಸ್ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು. ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ, ‘ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು.