ಮೈಸೂರು: ಸಿದ್ದರಾಮಯ್ಯ ತಮ್ಮ ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿ.ಕೆ.ಶಿವಕುಮಾರ್ ಎದೆಗೆ ಗುಂಡು ಹೊಡೆಯುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಈ ಸಂಬಂಧ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ. ಎಸ್.ಎಂ.ಕೃಷ್ಣ ಬಳಿಕ ಮತ್ತೊಮ್ಮೆ ಸಿಎಂ ಆಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಅಂತ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿದ್ದರು. ಒಕ್ಕಲಿಗರ ಮನೆ ಮನೆಗೆ ಹೋಗಿ ವೋಟು ಕೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆ ನಾಯಕತ್ವ ವಹಿಸಿದ್ದರು. ಮಾತ್ರವಲ್ಲ, ಚುನಾವಣೆಗೆ ಬಂಡವಾಳವನ್ನೂ ಹಾಕಿದ್ದರು. ಈ ಕಾರಣಕ್ಕಾಗಿಯೇ ಎರಡೂವರೆ ವರ್ಷದ ಬಳಿಕ ಸಿಎಂ ಆಗುವ ಭರವಸೆ ಸಿಕ್ಕಿತ್ತು. ಆದರೆ ಸಿದ್ದರಾಮಯ್ಯ ಸಿಎಂ ಚೇರ್ಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆ. ಮೊದಲು ಎಂ.ಬಿ.ಪಾಟೀಲ್ ಬಾಯಿಂದ ಐದು ವರ್ಷ ನಾನೇ ಸಿಎಂ ಅಂತ ಹೇಳಿಸಿದ್ದರು.ನಂತರ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಕೆ.ಎನ್.ರಾಜಣ್ಣ ಅವರಿಂದ ಹೇಳಿಕೆ ಕೊಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷ ಸಿಎಂ ಅಂತ ಹೇಳಿದ್ದರು. ಈಗ ಮಗನ ಮೂಲಕ ಹೇಳಿಸುತ್ತಿದ್ದಾರೆ ಎಂದು ಹೇಳಿದರು.