ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗಿಪಟ್ಟು ಹಿಡಿದಿರುವ ಸಂಸದೆ ಸುಮಲತಾ ಅಂಬರೀಶ್ ಇಂದು ಬೆಂಬಲಿಗರು, ಹಿತೈಷಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರು, ಆಪ್ತರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಳ್ಳಲಿದ್ದು, ಒಂದು ವೇಳೆ ಮಂಡ್ಯ ಜೆಡಿಎಸ್ ಪಾಲಾದರೆ ಏನು ಮಾಡೋಣ, ಪಕ್ಷೇತರವಾಗಿ ಸ್ಪರ್ಧಿಸಿದರೆ ಹೇಗೆ? ಎಂದು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇನ್ನು ಸಂಸದೆಯೊಂದಿಗೆ ಅಂತರ ಕಾಯ್ದುಕೊಂಡಿರುವ ಇಂಡವಾಳು ಸಚ್ಚಿದಾನಂದ ಅವರನ್ನು ಸಭೆಗೆ ಕರೆತರಲು ಸುಮಲತಾ, ನಟ ದರ್ಶನ್ ಅವರ ಮೊರೆ ಹೋಗಿದ್ದಾರೆ. ಈ ಸಭೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪಾಲ್ಗೊಳ್ಳುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.