ಮಂಡ್ಯ : ಜಿಲ್ಲೆಯ ಮೇಲುಕೋಟೆಯಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ ಸಂಬಂಧ ಹತ್ಯೆಯಾದ 30 ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿತೀಶ್ (21) ಬಂಧಿತ ಆರೋಪಿಯಾಗಿದ್ದಾನೆ. ಡಿವೈಎಸ್ಪಿ ಮುರಳಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ತನಿಖೆ ವಿಚಾರಣೆ ವೇಳೆ ದೀಪಿಕಾರನ್ನು ಪ್ಲ್ಯಾನ್ ಮಾಡಿಯೇ ಕೊಲೆ ಮಾಡಿರುವುದು ತಿಳಿದುಬಂದಿದೆ. ಕೊಲೆಗೂ ಮುನ್ನ ನಿತೀಶ್ ಗುಂಡಿ ತೆಗೆದಿದ್ದನು. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿದ್ದನು ಎಂದು ತಿಳಿದುಬಂದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಯಾಗಿದ್ದ ದೀಪಿಕಾ ಅವರು ಜನವರಿ 20 ರಂದು ಎಂದಿನಂತೆ ಶಾಲೆಗೆ ಹೋಗಿದ್ದರು. ಆದರೆ, ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಪತಿ ಲೋಕೇಶ್ ದೂರು ನೀಡಿದ್ದರು.
ಅಲ್ಲದೆ, ದೀಪಿಕಾಳಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಆಕೆಯ ಡಿಯೋ ಸ್ಕೂಟರ್ ಪತ್ತೆಯಾಗಿತ್ತು. ಈ ಪ್ರದೇಶದ ಸುತ್ತಮುತ್ತ ತೀವ್ರ ಹುಡುಕಾಟ ನಡೆಸಿದಾಗ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಹಶೀಲ್ದಾರ್, ಮೃತದೇಹದ ಹೊರತೆಗೆದಾಗ, ಶವ ದೀಪಿಕಾಳದ್ದಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದು, ದೀಪಿಕಾಳ ಪತಿ ಲೋಕೇಶ್, ನಿತೀಶ್ ಮೇಲೆ ಶಂಕೆ ವ್ಯಕ್ತಪಸಿಡಿದ್ದರು. ಅಲ್ಲದೆ ದೀಪಿಕಾಳನ್ನ ಯುವಕನೊಬ್ಬ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಇದನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.