ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಐತಿಹಾಸಿಕ ಹಂತ ಪ್ರವೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಆರ್ಬಿಐನ 90ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಧಾನಿಗಳು, ಆರ್ಬಿಐನ ಬದ್ಧತೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು. ಕಳೆದ ಒಂದು ದಶಕದಲ್ಲಿ ಆರ್ಬಿಐ ಮತ್ತು ತಮ್ಮ ಸರ್ಕಾರ ಮಾಡಿದ ಪ್ರಯತ್ನಗಳ ಫಲವಾಗಿ ಬ್ಯಾಂಕಿಂಗ್ ವಲಯ ಲಾಭದಾಯಕವಾಗಿದೆ ಮತ್ತು ಸಾಲ ನೀಡುವಿಕೆ ಹೆಚ್ಚುತ್ತಿದೆ ಎಂದು ಮೋದಿ ಈ ವೇಳೆ ಹೇಳಿದರು.
‘2014ರಲ್ಲಿ ಆರ್ಬಿಐನ 80ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದಾಗ ಪರಿಸ್ಥಿತಿ ಭಿನ್ನವಾಗಿತ್ತು. ಇಡೀ ಬ್ಯಾಂಕಿಂಗ್ ವಲಯ ಹಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿತ್ತು. ಭಾರತದ ಬ್ಯಾಂಕಿಂಗ್ ಸೆಕ್ಟರ್ನ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ಪ್ರತಿಯೊಬ್ಬರಿಗೂ ಅನುಮಾನವಿತ್ತು. ಪರಿಸ್ಥಿತಿ ಎಷ್ಟು ಹೀನವಾಗಿತ್ತು ಎಂದರೆ ದೇಶದ ಆರ್ಥಿಕ ಪ್ರಗತಿಗೆ ಅವಶ್ಯಕ ಕೊಡುಗೆ ನೀಡಲು ಸರ್ಕಾರಿ ಬ್ಯಾಂಕುಗಳಿಗೆ ಸಾಧ್ಯವಾಗದಂತಿತ್ತು. ಇವತ್ತು ಭಾರತದ ಬ್ಯಾಂಕಿಂಗ್ ವ್ಯವಸ್ಥೆ ವಿಶ್ವದಲ್ಲೇ ಬಲಿಷ್ಠ ಎನಿಸಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.