ಜನರನ್ನ ಹತ್ತಿಕ್ಕಲು ಮುಂದಾದ್ದ ರಾಜ್ಯ ಸರ್ಕಾರ । ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಹೇಳಿಕೆ
ಪ್ರತಿನಿಧಿ ವರದಿ ಬೇಲೂರು
ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನರನ್ನ ಹತ್ತಿಕ್ಕಲು ಮುಂದಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಹೇಳಿದರು.
ಇಂಧನ ತೈಲದ ಮೇಲಿನ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆಯಿಂದ ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಬಟಿಸಿ, ಉಪ ತಹಸೀಲ್ದಾರ್ ಅಶೋಕ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸರ್ಕಾರ ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದಂತೆ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಬರೆ ಎಳೆಯುತ್ತಿದೆ. ಇಂಧನ ತೈಲದ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಲಿದೆ. ಅಲ್ಲದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಬಡವರಿಗೆ ಮತ್ತು ಮದ್ಯಮ ವರ್ಗದವರಿಗೆ ಮಾತ್ರ ಗ್ಯಾರೆಂಟಿ ಯೋಜನೆ ಸಿಗುವಂತೆ ಮಾಡಬೇಕು. ಜತೆಗೆ ಸರ್ಕಾರಿ ನೌಕರರು, ಶ್ರೀಮಂತರಿಗೂ ಯೋಜನೆ ವಿಸ್ತರಿಸಿರುವುದರಿಂದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿರುವುದನ್ನು ತಪ್ಪಿಸಲು ಹೋಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಆದ್ದರಿಂದ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆಯುತ್ತಿದೆ. ಚುನಾವಣೆ ಸಂದರ್ಭ ಜನರಿಗೆ ನೀಡಿದ ಗ್ಯಾರೆಂಟಿ ಯೋಜನೆಗೆ ಕೊಡುವ ಹಣಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಒಂದು ಕಡೆ ಕೊಟ್ಟ ಹಾಗೆ ಮಾಡಿ ಮತ್ತೊಂದು ಕಡೆ ಲೂಟಿ ಹೊಡೆಯಲು ಸರ್ಕಾರ ಮುಂದಾಗಿದೆ. ಇದರಿಂದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಮೇಲೆಯೇ ದುಷ್ಪರಿಣಾಮ ಬೀರುವುದರಿಂದ ಸರ್ಕಾರ ತಕ್ಷಣವೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ ರಾಜ್ಯದ ಜನರಿಗೆ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.
ಜಯ ಕರ್ನಾಟಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹೇಮಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೇಯಸ್ಗೌಡ, ಆಟೋ ಘಟಕದ ಅಧ್ಯಕ್ಷ ಲಕ್ಷ್ಮಣ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಬಂಡೆ ಮಂಜು, ಮುಖಂಡರಾದ ಎನ್.ಯೋಗೇಶ್, ಚಂದ್ರಪ್ಪ, ಜಗದೀಶ, ಉಮೇಶ್ ಸೇರಿದಂತೆ ಇತರರಿದ್ದರು.